ಉಡುಪಿ: ಶಂಕರಪುರ ಮಲ್ಲಿಗೆ ಬೆಲೆ ಗಗನಕ್ಕೆ, ರೈತರ ಮುಖದಲ್ಲಿ ಮಂದಹಾಸ

ಶಂಕರಪುರ ಮಲ್ಲಿಗೆ ಬೆಳೆಗಾರರಿಗೆ ಮತ್ತಷ್ಟು ಸುವಾಸನೆ ಬೀರುತ್ತಿದೆ. ಮಲ್ಲಿಗೆಗೆ ಬೇಡಿಕೆ ಅಧಿಕವಾಗಿರುವು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಡುಪಿ: ಶಂಕರಪುರ ಮಲ್ಲಿಗೆ ಬೆಳೆಗಾರರಿಗೆ ಮತ್ತಷ್ಟು ಸುವಾಸನೆ ಬೀರುತ್ತಿದೆ. ಮಲ್ಲಿಗೆಗೆ ಬೇಡಿಕೆ ಅಧಿಕವಾಗಿರುವುದರಿಂದ ಒಂದು ಅಟ್ಟೆಗೆ ಕೆಲ ತಿಂಗಳ ಹಿಂದೆ ಇದ್ದ 820 ರೂಪಾಯಿ (ಸ್ಥಳೀಯ ಕರಾವಳಿ ಭಾಷೆಯಲ್ಲಿ ಅಟ್ಟೆ ಎಂದರೆ ಸುಮಾರು 3,200 ಹೂವುಗಳು) ಇದೀಗ 1,250 ರೂಪಾಯಿಗೆ ಏರಿಕೆಯಾಗಿದೆ. ಆದರೆ ಒಂದು ಅಟ್ಟೆಗೆ ಕನಿಷ್ಠ 300 ರೂಪಾಯಿ ನಿಗದಿಪಡಿಸಬೇಕೆಂಬ ತಮ್ಮ ಬೇಡಿಕೆ ಇನ್ನೂ ಈಡೇರಿಲ್ಲ ಎಂಬ ಬೇಸರ ಇಲ್ಲಿನ ಮಲ್ಲಿಗೆ ಬೆಳೆಗಾರರದ್ದು.

ಶಂಕರಪುರದ ಮಲ್ಲಿಗೆಗೆ ಕಳೆದ 5 ವರ್ಷಗಳ ಹಿಂದೆ ಜಿಐ(ಭೌಗೋಳಿಕ ಗುರುತು) ಟ್ಯಾಗ್ ಸಿಕ್ಕಿತ್ತು. ಪ್ರತಿದಿನ ಬೆಳಗ್ಗೆ 11.45ಕ್ಕೆ ಮಲ್ಲಿಗೆಗೆ ದರ ನಿಗದಿ ಮಾಡುವ 8 ಮಂದಿ ಮಧ್ಯವರ್ತಿಗಳು ಇರುತ್ತಾರೆ. ಈ ಮಧ್ಯವರ್ತಿಗಳು ವ್ಯಾಪಾರಿಗಳು ಮತ್ತು ಅಂಗಡಿಗಳಿಂದ ಆರ್ಡರ್ ಪಡೆದುಕೊಳ್ಳುತ್ತಾರೆ. ಶಂಕರಪುರ ಪಟ್ಟಣದಲ್ಲಿ ಮಲ್ಲಿಗೆ ಬೆಳೆಯುವವರಿಂದ ಖರೀದಿ ಮಾಡುತ್ತಾರೆ.

ಶಂಕರಪುರ ಮಲ್ಲಿಗೆ ಬೆಳೆ ಹೆಚ್ಚಾಗಿ ಬೇಡಿಕೆ ಕುಗ್ಗಿದಾಗ ಒಂದು ಅಟ್ಟೆಗೆ 60 ರೂಪಾಯಿಗೆ ಇಳಿಯುವುದು ಕೂಡ ಇದೆ. ಮದುವೆ ಇನ್ನಿತರ ಶುಭ ಸಮಾರಂಭಗಳ ಸಮಯದಲ್ಲಿ ಮಲ್ಲಿಗೆಯ ಬೆಲೆ 520ರಿಂದ 820 ರೂಪಾಯಿಗಳವರೆಗೆ ಏರಿಕೆಯಾಗುತ್ತದೆ. ಆದರೆ ಮಧ್ಯವರ್ತಿಗಳು ಬೆಳೆಗಾರರಿಗೆ 820 ರೂಪಾಯಿ ನೀಡುವುದಿಲ್ಲ. ಗ್ರಾಹಕರು ಬೇಡಿಕೆ ಸಮಯಗಳಲ್ಲಿ ಪ್ರತಿ ಅಟ್ಟೆಗೆ 1600 ರೂಪಾಯಿ ನೀಡಿ ಖರೀದಿಸುವುದೂ ಉಂಟು.

ಕಳೆದ ಶನಿವಾರದಿಂದ ಮಧ್ಯವರ್ತಿಗಳು ಬೆಳೆಗಾರರಿಗೆ ಪ್ರತಿ ಅಟ್ಟೆಗೆ 1250 ರೂಪಾಯಿ ನೀಡಲು ನಿರ್ಧರಿಸಿದ್ದಾರೆ. ಆದರೆ ಕನಿಷ್ಠ 300 ರೂಪಾಯಿ ನಿಗದಿಪಡಿಸಬೇಕು ಮತ್ತು ಗರಿಷ್ಠ ಬೆಲೆಯಲ್ಲಿ ಹೆಚ್ಚು ಅಂತರವಿರಬಾರದು ಎಂಬುದು ಮಲ್ಲಿಗೆ ಬೆಳೆಯುವವರ ಬೇಡಿಕೆಯಾಗಿದೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಲ್ಲಿಗೆ ಬೆಳೆಗಾರ ರಾಘವೇಂದ್ರ ನಾಯಕ್, ಕನಿಷ್ಠ ಬೆಲೆ 300 ರೂಪಾಯಿ ನಿಗದಿಪಡಿಸಿದರೆ ನಮಗೆ ತುಂಬಾ ಸಹಾಯವಾಗುತ್ತದೆ ಎನ್ನುತ್ತಾರೆ.

ಉಡುಪಿ ಮಲ್ಲಿಗೆ ಬೆಳೆಗಾರರ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟ್ವಾಳ ಮಾತನಾಡಿ, 2 ವರ್ಷಗಳ ಹಿಂದೆ ಗರಿಷ್ಠ ಬೆಲೆಯನ್ನು ಪರಿಷ್ಕರಿಸುವಂತೆ ಕೇಳಿಕೊಂಡೆವು. 10 ವರ್ಷಗಳ ಹಿಂದೆ ಪ್ರತಿ ಅಟ್ಟೆಗೆ 240 ರೂಪಾಯಿ ನಿಗದಿಪಡಿಸಿದ್ದರು. 6 ವರ್ಷಗಳ ಹಿಂದೆ 400 ರೂಪಾಯಿ ನಿಗದಿಪಡಿಸಿದರು. 2014ರಲ್ಲಿ ಪ್ರತಿ ಅಟ್ಟೆಗೆ 820 ರೂಪಾಯಿ ನಿಗದಿಪಡಿಸಲಾಯಿತು ಮತ್ತು ಇಂದು ಮತ್ತೆ ಪರಿಷ್ಕರಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com