ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ಶುಕ್ರವಾರ ಪ್ರಕರಣದ ಕುರಿತು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಬೆಂಗಳುರು 1ನೇ ಸೆಷನ್ಸ್ ಕೋರ್ಟ್‌ಗೆ 9235 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾದ ಕೆಲವರು "ಸನಾತನ ಸಂಸ್ಥೆ" ಜತೆ ನಂಟು ಹೊಂದಿದ್ದಾರೆ ಎಂದು ಹೇಳಿದೆ.
ಶುಕ್ರವಾರ ಸಂಜೆ ತನಿಕಾಧಿಕಾರಿಗಳ ತಂಡ ಟ್ರಂಕ್ ನಲ್ಲಿ ಚಾರ್ಜ್ ಶೀಟ್ ಗಳನ್ನು ಹೊತ್ತು ತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.
"ಪ್ರಕರಣದಲ್ಲಿ ಸನಾತನ ಸಂಸ್ಥೆಯ ನೇರ ಕೈವಾಡವಿದೆ ಎನ್ನುವುದು ಗೊತ್ತಿಲ್ಲ ಆದರೆ ಬಂಧಿತರಾದವರಲ್ಲಿ ಕೆಲವರು ಸಂಸ್ಥೆ ಜತೆಗೆ ಸಂಪರ್ಕದಲ್ಲಿದ್ದರೆನ್ನುವ ಬಗ್ಗೆ ಸಾಕ್ಷಿಗಳು ಲಭಿಸಿದೆ" ಎನ್ನಲಾಗಿದೆ.
"ನಾವು ಹಿಂದೂರಾಷ್ಟ್ರದ ಕನಸು ಕಂಡಿದ್ದೆವು. ಅದಕ್ಕಾಗಿ ಹೋರಾಡುತ್ತಿದ್ದೆವು. ೨೦೨೩ರ ಒಳಗೆ ಭಾರತವನ್ನು ಹಿಂದೂರಾಷ್ಟವಾಗಿಸುವುದು ನಮ್ಮ ದ್ಯೇಯವಾಗಿತ್ತು" ಎಂದು ಆರೋಪಿಗಳು ನೀಡಿರುವ ಹೇಳಿಕೆ ಚಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.
2017ರ ನವೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಅವರ ಮನೆಯ ಸಮೀಪವೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.ಈ ಸಂಬಂಧ ಇದುವರೆಗೆ ಹದಿನೇಳು ಆರೋಪಿಗಳನ್ನು ಬಂಧಿಸಲಾಗಿದ್ದು ನಿಹಾಲ್ ಅಲಿಯಾಸ್ ದಾದಾ ಎಂಬ ಪ್ರಮುಖ ಆರೋಪಿಗಾಗಿ ಪೋಲೀಸರು ಹುಡುಕಾಟ ಮುಂದುವರಿಸಿದ್ದಾರೆ.