ಗದಗ: ಕೋಮು ಸೌಹಾರ್ದತೆಗೆ ಇದೊಂದು ಉತ್ತಮ ಉದಾಹರಣೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜ್ಪುರ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ದೇವಸ್ಥಾನಗಳಲ್ಲಿ ಈದ್ ಮಿಲಾದ್ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ. ಗ್ರಾಮದ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ ಮುಸ್ಲಿಮರು, ಪ್ರವಾದಿ ಮೊಹಮ್ಮದ್ ಅವರ ಹುಟ್ಟುಹಬ್ಬವನ್ನು ಅಲ್ಲಿ ಪೂಜೆ ನೆರವೇರಿಸುವ ಮೂಲಕ ಆಚರಿಸಿದ್ದಾರೆ.
ಈದ್ ಮಿಲಾದನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಗ್ರಾಮದ ಅಪ್ಪಣ್ಣ ಮುಜಾವರ್, ಜುನ್ಸಬ್ ಮ್ಯಾಗೇರಿ, ಹುಸೇನ್ ಸಾಬ್ ವಸ್ತ್ರದ್ ಮೊದಲಾದವರಿಗೆ ಆಲೋಚನೆ ಬಂತು. ಧಾರ್ಮಿಕ ಸಮನ್ವಯತೆ ಮೂಲಕ ಗ್ರಾಮವನ್ನು ಮಾದರಿ ಎಂದು ತೋರಿಸಿಕೊಳ್ಳಬೇಕೆಂಬ ಬಯಕೆ ಇವರದ್ದು. ಇದಕ್ಕಾಗಿ ಗ್ರಾಮದ 15ರಿಂದ 20 ಮುಸಲ್ಮಾನರು ಎಲ್ಲಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ನೆರವೇರಿಸಿದರು.
ಹಿಂದೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ನಾವು ಭಕ್ತರಿಗೆ ಜ್ಯೂಸ್ ಮತ್ತು ಮಜ್ಜಿಗೆ ನೀಡುತ್ತೇವೆ. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಇಂತಹ ಕ್ರಮಗಳು ಸಹಾಯವಾಗುತ್ತವೆ. ಸಮಾಜದಲ್ಲಿ ದ್ವೇಷ, ಅಸೂಯೆ ಬಿತ್ತುವುದರಲ್ಲಿ ಅರ್ಥವಿಲ್ಲ ಎನ್ನುತ್ತಾರೆ ರಾಜುರ್ ಗ್ರಾಮದ ಅಪ್ಪಣ್ಣ ಮುಜಾವರ್.
ಈ ವರ್ಷ ಈದ್ ಮಿಲಾದನ್ನು ಎಲ್ಲಾ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲು ನಿರ್ಧರಿಸಿದೆವು. ಬೀರಣ್ಣ, ದ್ಯಾಮವ್ವ, ಹನುಮಾನ್ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದೆವು, ನಮ್ಮಲ್ಲಿ ಆರಂಭದಲ್ಲಿ ಸುಮಾರು 20 ಸದಸ್ಯರಿದ್ದರು, ಈಗ 100ಕ್ಕೂ ಹೆಚ್ಚು ಸದಸ್ಯರಾಗಿದ್ದೇವೆ. ಗ್ರಾಮದ ಎಲ್ಲರಿಗೂ ನಮಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಎನ್ನುತ್ತಾರೆ.
ಗ್ರಾಮದ ಹಿಂದೂ ಜನರು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ದೇವಾಲಯಗಳಿಗೆ ಮುಸ್ಲಿಂರು ಬಂದು ಪೂಜೆ ಸಲ್ಲಿಸುವುದು ನೋಡಿ ಹಲವರಿಗೆ ಆಶ್ಚರ್ಯವಾಗುತ್ತದೆ. ಹಿಂದೂ ಮುಸ್ಲಿಮರೆಂದು ಯಾವತ್ತಿಗೂ ಪ್ರತ್ಯೇಕವಾಗಿ ನೋಡುವ, ವಿಷದ ಬೀಜ ಬಿತ್ತುವವರಿಗೆ ಇದೊಂದು ಮಾದರಿ ಎನ್ನುತ್ತಾರೆ ಗ್ರಾಮಸ್ಥ ಅಲಗಪ್ಪ ಅಲವಂಡಿ.
Advertisement