ಬೆಂಗಳುರು: ಭಾನುವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ನಿವಾಸಕ್ಕೆ ನಾಳೆ (ಬುಧವಾರ) ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಲಿದ್ದಾರೆ. ಅಗಲಿದ ನಾಯಕನ ಕುಟುಂಬದವರಿಗೆ ಪ್ರಣಬ್ ಸಾಂತ್ವನ ಹೇಳಲಿದ್ದಾರೆ.
ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ "ಇಂಡಿಯಾ ವಿನ್ಸ್ ಫ್ರೀಡಮ್" ಆಂಗ್ಲ ಕೃತಿಯ ಉರ್ದು ಅನುವಾದ ಮಾಡಿದ್ದ ಜಾಫರ್ ಶರೀಫ್ ಅವರ ಪುಸ್ತಕ ಬಿಡುಗಡೆ ಸಮಾರಂಭ ನ. 28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಬೇಕಿದ್ದು ಇದಕ್ಕೆ ಪ್ರಣಬ್ ಅವರನ್ನು ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮವು ಪೂರ್ವನಿಗದಿಯಂತೆ ಬುಧವಾರ ನಡೆಯಲಿದ್ದು ಕಾರ್ಯಕ್ರಮಕ್ಕೆ ಆಗಮಿಸಲಿರುವ ಪ್ರಣಬ್ ಜಾಫರ್ ಶರೀಫ್ ಮನೆಗೆ ತೆರಳಿ ಅವರ ಕುಟುಂಬದವರಲ್ಲಿ ಸಾಂತ್ವನ ಹೇಳಲಿದ್ದಾರೆ.
ಮಾಜಿ ರಾಷ್ಟ್ರಪತಿ ಶರೀಫ್ ನಿವಾಸಕ್ಕೆ ಭೇಟಿ ನೀಡುವ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇರಿ ಸರ್ಕಾರದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.