ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ಅನಂತ್, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ; ತೇಜಸ್ವಿನಿ ಅನಂತ್ ಕುಮಾರ್

ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಷನಲ್ ...
ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು
ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು

ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ತಮ್ಮ ಪತಿಯನ್ನು ನೆನಪಿಸಿಕೊಂಡು ಮಾತನಾಡಿದ್ದು ಹೀಗೆ: 1988ನೇ ಇಸವಿಯಲ್ಲಿ ನಾವಿಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸಿಕೊಂಡಾಗ ಪಕ್ಷದ ಹಿರಿಯ ನಾಯಕರು ಮತ್ತು ಅತ್ಯಂತ ಹಿರಿಯವರಾದ  ಜಗನ್ನಾಥ್ ಜೋಷಿಯವರ ಬಳಿ ಧಾರವಾಡದಲ್ಲಿ ಗೋಖಲೆಯವರ ಮನೆಯಲ್ಲಿ ಹೋಗಿ ನಮ್ಮ ಮನದ ಬಯಕೆಯನ್ನು ಹೇಳಿಕೊಂಡೆವು.ಆಗ ಅವರು ಅನಂತ್ ಕುಮಾರ್ ಅವರನ್ನು ಕಂಡು ಈ ಮಾಣಿಕ್ಯ ಎಲ್ಲಿ ಸಿಕ್ತು ಅಂತ ಕೇಳಿದ್ರು.

ನನ್ನ ಜೀವನದಲ್ಲಿ ಸಿಕ್ಕ ಮಾಣಿಕ್ಯ ನನ್ನ ಪತಿಯಾದ ಅನಂತ್ ಕುಮಾರ್ ಅವರು. ಆ ಮಾಣಿಕ್ಯದ ಜೊತೆ 30 ವರ್ಷ ಜೀವನ ಮಾಡಿದ್ದೇನೆ ಆದರೆ ಆ ಮಾಣಿಕ್ಯ ಎಷ್ಟು ತೂಗುತ್ತದೆ, ಎಷ್ಟು ಅಳತೆ ಹೊಂದಿದೆ ಎಂದು ಅಳೆಯಲಿಲ್ಲ, ಅಳೆಯಲಿಕ್ಕೆ ಸಾಧ್ಯವೂ ಆಗಲಿಲ್ಲ, ಆದರೆ ಆ ಮಾಣಿಕ್ಯ ಸಮಾಜಕ್ಕೆ ನೀಡುತ್ತಿದ್ದ ಬೆಳಕಿನ ನಂಬಿಕೆಯಲ್ಲಿಯೇ ನಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಅನಂತ್ ಕುಮಾರ್ ಅವರ ಅಂತಿಮ 4 ತಿಂಗಳು ಬಿಟ್ಟರೆ ಅದರ ಹಿಂದಿನ ದಿನಗಳಲ್ಲೆವೂ ತೆರೆದು ಪುಸ್ತಕದಂತಿತ್ತು. ನಮ್ಮ ಮನೆ ಯಾರಿಗಾದರೂ, ಯಾವತ್ತಿಗೂ 24 ಗಂಟೆ ತೆರೆದಿತ್ತು. ಅವರ ಬಗ್ಗೆ ಮಾತನಾಡಲಿಕ್ಕೆ ಸಾಕಷ್ಟು ನೆನಪುಗಳಿವೆ. ಅವರು ಒಂದು ಮಾತು ಹೇಳಿದ್ರು, ನಾನು ನಿನ್ನನ್ನ ಕಡಿಮೆ ಪ್ರೀತಿಸ್ತೀನಿ ಅಂತ ಅಲ್ಲ. ಆದರೆ ದೇಶವನ್ನು ಹೆಚ್ಚು ಪ್ರೀತಿಸ್ತೀನಿ ಎಂದು. ಅವರು ಸಂಯಮ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಕೊನೆಯ ದಿನಗಳಲ್ಲಿ ತಮ್ಮ ಆರೋಗ್ಯದ ವಿಷಯ ಬಿಟ್ಟು ಅವರೆಂದೂ ಸುಳ್ಳು ಹೇಳಿಲ್ಲ.. ನಮ್ಮನ್ನು ಹೇಳಲು ಬಿಟ್ಟಿಲ್ಲ. ಅವರು ಪ್ರತೀ ವಿಷಯದಲ್ಲಿ ಕಾಳಜಿ ತೆಗೆದುಕೊಂಡಿದ್ರು ಅಂತಾ ನೆನಪುಗಳನ್ನು ಮೆಲುಕು ಹಾಕಿದ್ರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ನಾನು ಅವರ ಅಂತಿಮ ದಿನಗಳು ಮತ್ತು ಆರೋಗ್ಯದ ಬಗ್ಗೆ ಹೇಳಲೇಬೇಕು, ಅವರು ಆರೋಗ್ಯವನ್ನು ನಿರ್ಲಕ್ಷಿಸಿದ್ದರು ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಮ್ಮ ಕೈಯಲ್ಲಿ ಇರಲಿಲ್ಲ. ವಿಧಾನಸಭೆ ಚುನಾವಣೆ ವೇಳೆಗೆ ಸ್ವಲ್ಪ ಕೆಮ್ಮುತ್ತಾ ಇದ್ರು. ಔಷಧಿ ತೆಗೆದುಕೊಂಡರೆ ಕಡಿಮೆಯಾಗಲಿಲ್ಲ. ಚುನಾವಣೆ ಮುಗಿದ ಮೇಲೆ ಸರಿ ಹೋಗಬಹುದು ಎಂದು ಅಂದುಕೊಂಡೆವು. ಆದರೆ ಕಡಿಮೆಯಾಗದ್ದರಿಂದ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದೆವು. ಅವಾಗಲೇ ಗುಮಾನಿಯಾಗಿತ್ತು. ಯಾರಿಗೂ ವಿಷಯವನ್ನು ಹೇಳಿಲ್ಲ. ಕೊನೆಗೆ ಬೆಂಗಳೂರಿಗೆ ಬಂದು ಅಪೊಲೊ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಖಚಿತವಾಯಿತು. ಕ್ಯಾನ್ಸರ್ ಆ ಹೊತ್ತಿಗೆ ಅತ್ಯಂತ ವೇಗವಾಗಿ ದೇಹದೊಳಗೆ ಪಸರಿಸುತ್ತಿತ್ತು. ಅವಾಗ ಅವರು ಡಾಕ್ಟರ್ ಬಳಿ ನಾನು ಏನು ಮಾಡಬಹುದು ಅಂತ ಕೇಳಿದ್ರು. ಭಗವದ್ಗೀತೆಯನ್ನು ದಿನಾ ಬಿಡದೆ ಓದುತ್ತಿದ್ದರು. ನಾನು ಕೆಲಸ ಮಾಡುವುದನ್ನು ಮಾತ್ರ ನೋಡಬೇಕು, ಇಲ್ಲಂದ್ರೆ ಯಾರು ನನ್ನನ್ನು ನೋಡೋದು ಬೇಡ ಅಂದ್ರು.

ಅಮೇರಿಕಾಗೆ ಚಿಕಿತ್ಸೆಗೆ ಹೋದ ಮೇಲೆ ಯಾವ ಸುಧಾರಣೆಯೂ ಕಂಡುಬರಲಿಲ್ಲ. ಅವರಿಗೆ ಕ್ಯಾನ್ಸರ್ ಇದೆ ಎಂಬುದು ನನಗೆ ಮತ್ತು ಅವರ ಸಹೋದರನಿಗೆ ಬಿಟ್ಟರೆ ಬೇರೆ ಯಾರಿಗೂ ಹೇಳಲಿಲ್ಲ. ಎಂದಿನಂತೆ ಕರ್ತವ್ಯದಲ್ಲಿ ನಿರತರಾಗಿದ್ದರು. ಕೊನೆಯ ದಿನಗಳವರೆಗೂ ಕೆಲಸ ಮಾಡಬೇಕೆಂದುಕೊಂಡೇ ಇದ್ದರು. ನನ್ನನ್ನು ಯಾರೂ ಹುಷಾರಿಲ್ಲದವನೆಂದು ನೋಡುವುದು ಬೇಡ, ಯಾರು ಕೇಳಿದರೂ ನನಗೆ ಏನಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದರು.
ಅಮೆರಿಕಾದಲ್ಲಿರುವಾಗ ನಾನು ನನ್ನ ದೇಶಕ್ಕೆ ಹೋಗಬೇಕು ಅಂದಿದ್ರು.ಕೊನೆಗೆ ಬೆಂಗಳೂರಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದೆವು. ವೈದ್ಯರು ಕೂಡ ತಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮಾಡಿದ್ದರು ಎಂದು ತೇಜಸ್ವಿನಿ ಅನಂತ್‌ಕುಮಾರ್ ನುಡಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ಬಿಜೆಪಿಯನ್ನು ಬೆಳೆಸುವಲ್ಲಿ ಅನಂತ್ ಕುಮಾರ್ ಅವರ ಕೊಡುಗೆ, ತಮ್ಮ ಮತ್ತು ಅನಂತ್ ಕುಮಾರ್ ನಡುವಿನ ಒಡನಾಟವನ್ನು ನೆನಪಿಸಿಕೊಂಡರು. ತಮ್ಮನ್ನು ವಕೀಲ್ ಸಾಬ್ ಎನ್ನುತ್ತಿದ್ದರು ಎಂದು ಸ್ಮರಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಬಿಜೆಪಿ ಅಗ್ರ ನಾಯಕರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com