ರಾಫೆಲ್ ಒಪ್ಪಂದದಲ್ಲಿ ಹೆಚ್ ಎಎಲ್ ಅನ್ನು ನಿರ್ಲಕ್ಷಿಸಿಲ್ಲ, ಕಾಂಗ್ರೆಸ್ ಆರೋಪ ಸುಳ್ಳು: ನಿರ್ಮಲಾ ಸೀತಾರಾಮನ್

ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡ ರಾಫೆಲ್ ಯುದ್ಧ ವಿಮಾನ ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ರಾಫೆಲ್ ಒಪ್ಪಂದ ಬಗ್ಗೆ ...
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು: ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡ ರಾಫೆಲ್ ಯುದ್ಧ ವಿಮಾನ ಒಪ್ಪಂದವನ್ನು ಸಮರ್ಥಿಸಿಕೊಂಡಿರುವ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ರಾಫೆಲ್  ಒಪ್ಪಂದ ಬಗ್ಗೆ ಕೇಳಿಬರುತ್ತಿರುವ ಇಡೀ ಪ್ರಚಾರ ಸುಳ್ಳುತನ ಮತ್ತು ಅಧ್ಯಸತ್ಯಗಳನ್ನು ಆಧರಿಸಿದೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷ ಕಾಂಗ್ರೆಸ್ ನ ಪ್ರಚಾರ ಬೇಜವಬ್ದಾರಿತನದಿಂದ ಕೂಡಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್(ಹೆಚ್ ಎಎಲ್)  ನ ಭವಿಷ್ಯವನ್ನು ಸುಧಾರಿಸಲು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ,  ಭಾರತೀಯ ವಾಯುಪಡೆಯನ್ನು ಯುಪಿಎ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದಾರೆ.

ಅವರು ನಿನ್ನೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಚ್ ಎಎಲ್ ಸುಧಾರಣೆಗೆ ವಾಸ್ತವವಾಗಿ ಯಾರು ಕೆಲಸ ಮಾಡಲಿಲ್ಲ? ಡಸ್ಸೌಲ್ಟ್ ಮತ್ತು ಹೆಚ್ ಎಎಲ್ ಮಧ್ಯೆ ಯಾರು ಒಪ್ಪಂದ ಅಂತಿಮಗೊಳಿಸಲಿಲ್ಲ? ಯುಪಿಎ ಅಂತಿಮಗೊಳಿಸಿದ ಒಪ್ಪಂದವನ್ನು ಎನ್ ಡಿಎ ಸರ್ಕಾರ ತಿರಸ್ಕರಿಸಿತೇ? ಎಂದು ಪ್ರಶ್ನಿಸಿದ್ದಾರೆ.

ಹೆಚ್ ಎಎಲ್ ದೇಶದಲ್ಲಿ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಸುವ ಅವಕಾಶ ಕಳೆದುಕೊಂಡಿತು ಎಂಬ ಕಾಂಗ್ರೆಸ್ ನ ಆರೋಪ ನಿಜವೇ ಆಗಿದ್ದರೆ ಕಾಂಗ್ರೆಸ್ ನವರು ನನಗೆ ಮಾಡಿಕೊಂಡ ಒಪ್ಪಂದ ತೋರಿಸಲಿ. ಕಾಂಗ್ರೆಸ್​ ಒಪ್ಪಂದ ಮಾಡಿಕೊಂಡ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ ಇದೀಗ ಏಕಾಏಕಿ ಎನ್​ಡಿಎ ಸರ್ಕಾರದ ಮೇಲೆ ಕಾಂಗ್ರೆಸ್​​ ದಾಳಿ ನಡೆಸುತ್ತಿದೆ. ನಮ್ಮ ಸರ್ಕಾರ ರಾಫೆಲ್  ಡೀಲ್ ಡಸೌಲ್ಟ್ ಗೆ ಕೊಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಈ ಬಗ್ಗೆ ಮಾತಾಡಲು ಕಾಂಗ್ರೆಸ್ಸಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನ ಆರೋಪಕ್ಕೆ ಪ್ರತಿಯಾಗಿ ಅವರು, ಎನ್ ಡಿಎ ಸರ್ಕಾರ ಹೆಚ್ ಎಎಲ್ ಗೆ ಏನೇನು ಅನುಕೂಲತೆ ಮಾಡಿಕೊಟ್ಟಿತು ಎಂದು ವಿವರಿಸಿದರು. 2010ರಿಂದ 2014ರವರೆಗೆ ಸುಮಾರು 40 ಹಗುರ ಯುದ್ಧ ವಿಮಾನ(ಎಲ್ ಸಿಎ) ತೇಜಸ್ ನ್ನು ಹೆಚ್ ಎಎಲ್ ಗೆ ನೀಡಲಾಗಿತ್ತು. ಆ ಸಮಯದಲ್ಲಿ ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಪ್ರತಿವರ್ಷ ಹೆಚ್ ಎಎಲ್ ಗೆ 6ರಿಂದ 7 ಯುದ್ಧ ವಿಮಾನಗಳನ್ನು ತಯಾರಿಸಲು ಸಾಧ್ಯವಾಗುತ್ತಿತ್ತು. ಆದರೆ 2014ರ ನಂತರ ಎನ್ ಡಿಎ ಸರ್ಕಾರ ಅವಧಿಯಲ್ಲಿ ಹೆಚ್ ಎಎಲ್ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಸೌಕರ್ಯಗಳನ್ನು ಒದಗಿಸಿದ್ದರಿಂದ ಇಂದು ಸಂಸ್ಥೆ ಪ್ರತಿವರ್ಷ 16 ಯುದ್ಧ ವಿಮಾನಗಳನ್ನು ತಯಾರಿಸುತ್ತಿದೆ ಎಂದು ಹೇಳಿದರು.

ಹಗುರ ಯುದ್ಧ ವಿಮಾನ ತಯಾರಿ, ರಕ್ಷಣಾ ಸಚಿವಾಲಯ, ಹೆಚ್ಎಎಲ್ ಮತ್ತು ಇತರ ರಕ್ಷಣಾ ವಲಯ ಷೇರುದಾರರ ಮಧ್ಯೆ ಚರ್ಚೆ ನಡೆಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com