
ಬೆಂಗಳೂರು: ಮೀಸಲಾತಿ ಆಧಾರಿತ ಬಡ್ತಿ ಪ್ರಕಾರ ಮುಂದುವರಿಯಲು ರಾಜ್ಯ ಸರ್ಕಾರ ಒಪ್ಪದಿರುವುದರಿಂದ ಸುಪ್ರೀಂ ಕೋರ್ಟ್ ನ ತೀರ್ಪು ಹೊರತಾಗಿಯೂ ರಾಜ್ಯದ ಸುಮಾರು 45 ಸಾವಿರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸರ್ಕಾರಿ ನೌಕರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಜೆಡಿಎಸ್-ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಇದರಿಂದಾಗಿ ರಾಜ್ಯದ 3,795 ಎಸ್.ಸಿ/ ಎಸ್.ಟಿ ನೌಕರರ ಬಡ್ತಿಯ ಯಥಾಸ್ಥಿತಿ ಮುಂದುವರಿಸಲು ವಿಳಂಬವಾಗುತ್ತಿದೆ. 5 ಸಾವಿರಕ್ಕೂ ಅಧಿಕ ನೌಕರರ ಅಗತ್ಯ ಬಡ್ತಿ ಸ್ಥಗಿತವಾಗಿದೆ. ವಿಳಂಬದಿಂದಾಗಿ ಸರ್ಕಾರದ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಬಗ್ಗೆ ಕಾಳಜಿ ಹೊಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ದಲಿತ ಪರ ಮತ್ತು ಹಿಂದುಳಿದ ಪರವಾಗಬೇಕಿತ್ತು ಆದರೆ ಅದು ಹಾಗೆ ಮಾಡುತ್ತಿಲ್ಲ. ಕಳೆದ ಜೂನ್ ನಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಗೆ ರಾಜ್ಯ ಮಾಹಿತಿ ನೀಡಿ ಜಾರಿಗೆ ತರಬಹುದಾಗಿತ್ತು ಆದರೆ ಇತರ ಸಮುದಾಯಗಳಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಸರ್ಕಾರ ತಿಂಗಳುಗಳಿಂದ ದೂಡುತ್ತಾ ಬಂದಿದೆ. ಪ್ರತಿ ಸಂಪುಟ ಸಭೆಯಲ್ಲಿ ವಿಧೇಯಕವನ್ನು ಕೈಗೆತ್ತಿಕೊಳ್ಳಲಾದರೂ ಆ ಬಗ್ಗೆ ಚರ್ಚೆ ನಡೆದರೂ ಅದು ಜಾರಿಗೆ ಬಂದಿಲ್ಲ. ಈ ಹಿಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಕೂಡ ಚರ್ಚೆಗೆ ಬಂದಿತ್ತು. ನಾವು ಸುಪ್ರೀಂ ಕೋರ್ಟ್ ತೀರ್ಮಾನವನ್ನು ಪಾಲಿಸಲಿದ್ದೇವೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದರು.
1978ರಿಂದ ಎಸ್.ಸಿ ಸಮುದಾಯಕ್ಕೆ ಶೇಕಡಾ 15ರಷ್ಟು ಮತ್ತು ಎಸ್ ಟಿ ಸಮುದಾಯಕ್ಕೆ ಶೇಕಡಾ 3ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುತ್ತಿದೆ. ಆದರೆ ಈ ವರ್ಗದ ಪ್ರಾತಿನಿಧ್ಯ ಅಸಮರ್ಪಕವಾಗಿದೆ. 2017ರಲ್ಲಿ ಅಂದರೆ ಕಳೆದ ವರ್ಷ ಸರ್ಕಾರ ಹಿಂದಿನ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸರ್ಕಾರಿ ಉದ್ಯೋಗಗಳಲ್ಲಿ ಎಸ್.ಸಿ ಮತ್ತು ಎಸ್ ಟಿ ಸಮುದಾಯದ ಪ್ರಾತಿನಿಧ್ಯದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಹೇಳಿತ್ತು. ಆ ಸಮಿತಿ ನೀಡಿರುವ ವರದಿ ಪ್ರಕಾರ ಸರ್ಕಾರದ ಗ್ರೂಪ್ ಎ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಲ್ಲಿ ಎಸ್.ಸಿ/ ಎಸ್ ಟಿ ಸಮುದಾಯದ ಪ್ರಾತಿನಿಧಿತ್ವದಲ್ಲಿ ಅಸಮರ್ಪಕತೆ ಕಂಡುಬಂದಿದೆ.
Advertisement