ಪ್ರಾಮಾಣಿಕವಾಗಿ ಕೆಲಸ ಮಾಡುವುದು ತಪ್ಪೇ?: ಪಿಡಿ ಅಧಿಕಾರಿಯಿಂದ ಮುಖ್ಯಮಂತ್ರಿಗೆ ಪತ್ರ

ಗ್ರಾಮೀಣಾಭಿವೃದ್ಧಿಯಲ್ಲಿ ಉತ್ತಮ ಕೆಲಸ ಮಾಡಿದ ಗ್ರಾಮ ಪಂಚಾಯತ್ ಎಂದು ಗಾಂಧಿ ಜಯಂತಿ ...
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿಯಲ್ಲಿ ಉತ್ತಮ ಕೆಲಸ ಮಾಡಿದ ಗ್ರಾಮ ಪಂಚಾಯತ್ ಎಂದು ಗಾಂಧಿ ಜಯಂತಿ ಪ್ರಯುಕ್ತ ಬೀದರ್ ಜಿಲ್ಲೆಯ ಚಂಬೊಲ್ ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸಿಕ್ಕಿದ ಸಂಭ್ರಮಾಚರಣೆಯಲ್ಲಿದ್ದರೂ ಕೂಡ ಇಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಮಂಗಳಾ ಕಂಬ್ಳೆ ಮಾತ್ರ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಕಚೇರಿಯಲ್ಲಿ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರಂತರ ಕಿರುಕುಳದಿಂದ ಬೇಸತ್ತು ಕಾರ್ಯಕ್ರಮದಿಂದ ದೂರವುಳಿದಿದ್ದರು.

ಅಷ್ಟೇ ಅಲ್ಲ ಗಾಂಧಿ ಜಯಂತಿ ಮುನ್ನಾದಿನ ಈ ಬಗ್ಗೆ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಖ್, ಸಚಿವ ಕೃಷ್ಣ ಭೈರೇಗೌಡ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಪತ್ರ ಬರೆದಿರುವ ಅವರು, ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನನಗೆ ಕಿರುಕುಳ ನೀಡುತ್ತಿದ್ದು ಪ್ರಾಮಾಣಿಕ ಅಧಿಕಾರಿಯಾಗಿರುವುದಕ್ಕೆ ನನಗೆ ಜೀವಬೆದರಿಕೆ ಕೂಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕ ಹಣವನ್ನು ಲೂಟಿ ಮಾಡಿ ಭ್ರಷ್ಟಾಚಾರ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ಇಂದು ಅಪರಾಧವಾಗಿದೆ. ನನಗೆ ಕಿರುಕುಳ ನೀಡುವುದು ಮಾತ್ರವಲ್ಲದೇ ನನ್ನ ವಿರುದ್ಧ ಸುಮ್ಮನೆ ಆರೋಪ ಹೊರಿಸಿ ಕಠಿಣ ಶಿಕ್ಷ ನೀಡಲು ನನ್ನ ವಿರುದ್ಧ ಸುಳ್ಳು ಕ್ರಿಮಿನಲ್ ಆರೋಪಗಳನ್ನು ಮಾಡುತ್ತಿದ್ದಾರೆ. ಗೂಂಡಾಗಳನ್ನು ಬಿಟ್ಟು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳುವಂತೆ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ನನ್ನ ಮೇಲಾಧಿಕಾರಿಗಳು ಮತ್ತು ಚುನಾವಣಾ ಜನಪ್ರತಿನಿಧಿಗಳು ಕಾರಣ ಎಂದು ಕಂಬ್ಳೆ ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದಲ್ಲಿ ಯಾರೊಬ್ಬರ ಹೆಸರನ್ನೂ ಪ್ರಸ್ತಾಪಿಸದ ಅವರು ಇನ್ನೂ ಹೆಚ್ಚು ಹೇಳಿದರೆ ಇಲ್ಲಿನ ವ್ಯವಸ್ಥೆ ನನ್ನನ್ನು ಸುಮ್ಮನೆ ಬಿಡುವುದಿಲ್ಲ, ಇಷ್ಟೆಲ್ಲಾ ನೋವು, ಕಿರುಕುಳ ನೀಡುತ್ತಿದ್ದರೂ ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ನಾನು ನನ್ನ ಪ್ರಾಮಾಣಿಕ ಕೆಲಸವನ್ನು ಮುಂದುವರಿಸುತ್ತೇನೆ. ಭ್ರಷ್ಟಾಚಾರಕ್ಕೆ ನಾನು ನನ್ನ ಕಣ್ಣು ಮತ್ತು ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com