ದಸರಾ ಉದ್ಘಾಟನೆಗೆ ಡಾ. ಸುಧಾ ಮೂರ್ತಿ, ರಾಜ್ಯಪಾಲರಿಗೆ ಅಧಿಕೃತ ಆಹ್ವಾನ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018ರ ಉದ್ಘಾಟನೆಗೆ ರಾಜ್ಯ ಸರ್ಕಾರದ ವತಿಯಿಂದ ...
ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಮತ್ತು ಡಾ ಸುಧಾಮೂರ್ತಿಗೆ ಆಹ್ವಾನ
ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಮತ್ತು ಡಾ ಸುಧಾಮೂರ್ತಿಗೆ ಆಹ್ವಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018ರ ಉದ್ಘಾಟನೆಗೆ ರಾಜ್ಯ ಸರ್ಕಾರದ ವತಿಯಿಂದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ, ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರಿಗೆ ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಶಾಸಕರಾದ  ಎಚ್‌.ವಿಶ್ವನಾಥ್‌, ಎಸ್‌.ಎ.ರಾಮದಾಸ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಮೊದಲಾದವರು ಬೆಂಗಳೂರಿನ ಜಯನಗರದಲ್ಲಿರುವ ಇನ್ಫೋಸಿಸ್‌ ಪ್ರತಿಷ್ಠಾನದ ಕಚೇರಿಗೆ ತೆರಳಿ ಡಾ.ಸುಧಾಮೂರ್ತಿ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ರೇಷ್ಮೆ ಹಾರ ಹಾಕಿ, ಫ‌ಲ-ತಾಂಬೂಲ ನೀಡಿ ಗೌರವಿಸುವ ಮೂಲಕ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಿಸುವಂತೆ ಅಧಿಕೃತ ಆಹ್ವಾನ ನೀಡಿದರು.

ಈ ವೇಳೆ ಮಾತನಾಡಿದ ಡಾ ಸುಧಾಮೂರ್ತಿ, ಮೈಸೂರು ನನ್ನ ನೆಚ್ಚಿನ ಊರುಗಳಲ್ಲಿ ಒಂದು. ಇಲ್ಲಿನ ನಾಡಹಬ್ಬ ದಸರಾ ಉದ್ಘಾಟಿಸಲು ಈ ವರ್ಷ ನನ್ನನ್ನು ಆಯ್ಕೆ ಮಾಡಿರುವುದು ನನಗೆ ಅತೀವ ಖುಷಿ ಕೊಟ್ಟಿದೆ. ದಸರಾ ಮಹೋತ್ಸವ ನಾಡ ಹಬ್ಬ. 60 ವರ್ಷಗಳ ಹಿಂದೆ ದಸರಾ ನೋಡಿದ್ದೆ. ಈ ವರ್ಷ ನಾನೇ ದಸರಾ ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.

ಬಳಿಕ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರನ್ನು ಆಹ್ವಾನಿಸಲು ರಾಜಭವನಕ್ಕೆ ತೆರಳಿ ಅಲ್ಲಿ ಅವರಿಗೆ ಹಾರ ಹಾಕಿ ಪೇಟ ತೊಡಿಸಿ ಫಲ ತಾಂಬೂಲ ನೀಡಿ ನಾಡಹಬ್ಬಕ್ಕೆ ಆಹ್ವಾನಿಸಿದರು. ಬಳಿಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಯಿತು. ಡಾ.ಸುಧಾಮೂರ್ತಿಯವರು ಇದೇ ತಿಂಗಳ 10ರಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com