ಮೈಸೂರು ದಸರಕ್ಕೆ ಕಸ ರಾಶಿ ಸಮಸ್ಯೆ; ಪೌರ ಕಾರ್ಮಿಕರ ಮುಂದುವರಿದ ಮುಷ್ಕರ

ದಸರಾ ಹಬ್ಬ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ನಗರದ ಪೌರಕಾರ್ಮಿಕರ ...
ನಡು ರಸ್ತೆಯಲ್ಲಿ ಕಸ ತಂದು ರಾಶಿ ಹಾಕಿ ಪೌರ ಕಾರ್ಮಿಕರ ಪ್ರತಿಭಟನೆ
ನಡು ರಸ್ತೆಯಲ್ಲಿ ಕಸ ತಂದು ರಾಶಿ ಹಾಕಿ ಪೌರ ಕಾರ್ಮಿಕರ ಪ್ರತಿಭಟನೆ

ಮೈಸೂರು: ದಸರಾ ಹಬ್ಬ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ನಗರದ ಪೌರಕಾರ್ಮಿಕರ ಪ್ರತಿಭಟನೆ ಮಾತ್ರ ನಿಂತಿಲ್ಲ. ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ನಗರದಲ್ಲಿ ಈಗಾಗಲೇ ಕಸ ತುಂಬಿ ತುಳುಕುತ್ತಿದ್ದು ನಿನ್ನೆಪರಿಸ್ಥಿತಿ ಇನ್ನೂ ಬಿಗಡಾಯಿಸಿತು.

ಪ್ರತಿಭಟನೆ ವೇಳೆ ಪೌರಕಾರ್ಮಿಕರು ಕಸವನ್ನು ತಂದು ಮುಖ್ಯ ರಸ್ತೆಗಳಲ್ಲಿ ರಾಶಿ ಹಾಕಿದರು. ದೇವರಾಜ್ ಮಾರ್ಕೆಟ್ ರಸ್ತೆ, ನ್ಯೂ ಸಯಾಜ್ಜಿ ರಾವ್ ರಸ್ತೆ ಮತ್ತು ಇತರ ವಾಣಿಜ್ಯ ಪ್ರದೇಶಗಳಲ್ಲಿ ಕಸ ತುಂಬಿ ತುಳುಕುತ್ತಿದ್ದು, ಜನರ ಸಂಚಾರಕ್ಕೆ ವ್ಯಾಪಾರ ವಹಿವಾಟುಗಳಿಗೆ ಕಷ್ಟವಾಯಿತು.

ಸೇವೆಗಳ ಖಾಯಮಾತಿ, ಗುತ್ತಿಗೆ ವ್ಯವಸ್ಥೆ ತೆಗೆದುಹಾಕಬೇಕು ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ಮೊನ್ನೆ 3ನೇ ತಾರೀಖಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಪೌರಕಾರ್ಮಿಕರ ನಿಯೋಗವನ್ನು ಸಚಿವ ಜಿ ಟಿ ದೇವೇಗೌಡ ಮತ್ತು ಸಾ ರಾ ಮಹೇಶ್ ಭೇಟಿ ಮಾಡಿ ಬೇಡಿಕೆಗಳನ್ನು ಆಲಿಸಿದ್ದರು. ಆದರೆ ಮಾತುಕತೆ ವೇಳೆ ಒಮ್ಮತಕ್ಕೆ ಬರಲು ವಿಫಲವಾಯಿತು.

ಮೈಸೂರು ನಗರ ಪಾಲಿಕೆ ಎದುರು ಪೌರ ಕಾರ್ಮಿಕರನ್ನು ಭೇಟಿ ಮಾಡಿದ ಸಚಿವರು ತಮ್ಮ ಬೇಡಿಕೆಗಳ ಬಗ್ಗೆ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಅವರ ಜೊತೆ ಚರ್ಚಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರೊಂದಿಗೆ ಸಭೆ ನಡೆಸುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ.

ದಸರಾ ಹಬ್ಬ ಇರುವುದರಿಂದ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಪೌರಕಾರ್ಮಿಕರಿಗೆ ಮನವಿ ಮಾಡಿಕೊಂಡರು.ಆದರೆ ತಮ್ಮ ಬೇಡಿಕೆ ಈಡೇರಿಸದೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕ ಮಹಾಸಂಘದ ಅಧ್ಯಕ್ಷ ಮಾಜಿ ಮೇಯರ್ ನಾರಾಯಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com