ಬೆಳಗಾವಿ: ಗೋವಾ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದರೆ ಆಕೆಯ ಸೋದರಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರ ಸಂಜೆ ಈ ಅಪಘಾತ ಸಂಭವಿಸಿದ್ದು ಘಟನೆಯು ಈ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದರು.
ಗೋವಾ ಶಾಸಕರಾದ ಗ್ಲೈನ್ ಟಿಕ್ಲೋ ಅವರ ಮಗ ಕೈಲ್ ಗ್ಲೈನ್ ಸೋಜಾ (27) ಕಾರು ಚಲಾಯಿಸುತ್ತಿದ್ದ. ಎನ್ಎಚ್ -4 ನಲ್ಲಿ ಕಾರು ಚಾಲನೆಯಲ್ಲಿದ್ದಾಗ ಹಣ್ಣಿನ ಮಾರುಕಟ್ಟೆ ಬಳಿ ಇಬ್ಬರು ಯುವತಿಯರು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಯುವತಿ ತಾಹಿನಿಯತ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ಶಾಸಕರ ಪುತ್ರನನ್ನು ಬಂಧಿಸಲಾಗಿದೆ. ಆದರೆ ಇದೀಗ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಗಂಭೀರ ಗಾಯಗೊಂಡಿರುವ ಇನ್ನೋರ್ವ ಯುವತಿ ಸಾಮ್ರಿನ್ ಖಾಲಿದ್ ಬಿಸ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಇದೇ ವೇಳೆ ಘಟನೆಯಿಂದ ಉದ್ವಿಗ್ನಗೊಂಡ ಜನರು ಕಾರಿನತ್ತ ಕಲ್ಲು ತೂರಿ ಗಾಜುಗಳನ್ನು , ನಾಮ ಫಲಕಗಳನು ಹಾನಿಗೊಳಿಸಿದೆ. ಅಲ್ಲದೆ ಕಾರಿಗೆ ಬೆಂಕಿ ಹಚ್ಚಲೂ ಪ್ರಯತ್ನಿಸಿದ್ದಾರೆ. ಆಗ ಸ್ಥಳಕ್ಕೆ ಆಗಮಿಸಿದ ಪೋಲೀಸರು ಗಲಭೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಕಾರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಕ್ಕಾಗಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.