ಪ್ರಕಾಶ್ ರೈಯವರೇ ಎಲ್ಲಿದ್ದೀರಿ? ನಿಮಗಾಗಿ ಕಾಯುತ್ತಿದ್ದಾರೆ ಹಿರಿಯೂರಿನ ಬಂಡ್ಲರಹಟ್ಟಿ ಗ್ರಾಮಸ್ಥರು

ಫ್ಲೋರೈಡ್ ನಿಂದ ಗಂಭೀರವಾಗಿ ಹಾನಿಗೀಡಾಗಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ...
ಪ್ರಕಾಶ್ ರೈ
ಪ್ರಕಾಶ್ ರೈ

ಚಿತ್ರದುರ್ಗ: ಫ್ಲೋರೈಡ್ ನಿಂದ ಗಂಭೀರವಾಗಿ ಹಾನಿಗೀಡಾಗಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಕಳೆದ ಜನವರಿಯಲ್ಲಿ ಭೇಟಿ ನೀಡಿದ್ದ ನಟ ಪ್ರಕಾಶ್ ರೈ ಘೋಷಿಸಿದ್ದರು. ಆದರೆ ನಂತರ ಒಮ್ಮೆಯೂ ಅತ್ತ ಸುಳಿಯಲಿಲ್ಲ, ಇದು ಗ್ರಾಮಸ್ಥರ ನಿರಾಶೆಗೆ ಕಾರಣವಾಗಿದೆ.

ಫ್ಲೋರೈಡ್ ನಿಂದ ಇಲ್ಲಿನ ಗ್ರಾಮಸ್ಥರಿಗೆ ಏನೇನು ತೊಂದರೆಯಾಗುತ್ತದೆ ಎಂದು ತಿಳಿದುಕೊಳ್ಳಲು ನಟ ಪ್ರಕಾಶ್ ರೈ ಕಳೆದ ಜನವರಿ 27ರಂದು ಹಿರಿಯೂರು ತಾಲ್ಲೂಕಿನ ಬಂಡ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಫ್ಲೋರೈಡ್ ವಿಷಯವನ್ನು ಮತ್ತು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ತಾನು ಗ್ರಾಮವನ್ನು ದತ್ತು ಪಡೆದುಕೊಂಡು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸುವುದಾಗಿ, ಅದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿದ್ದರು.

ಇದೀಗ ಅವರು ಭೇಟಿ ನೀಡಿ ಆಶ್ವಾಸನೆ ಕೊಟ್ಟು ವರ್ಷವಾಗುತ್ತಾ ಬಂದಿದೆ. ನಂತರ ಒಮ್ಮೆಯೂ ಗ್ರಾಮದತ್ತ ಸುಳಿಯಲಿಲ್ಲ. ಅಲ್ಲಿನ ಸಮಸ್ಯೆಯೇನು ಎಂದು ಅರಿಯಲಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ಅಭಿಯಾನ ಕೈಗೊಂಡು ಅಲ್ಲಿನ ನೀರಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಯೋಜನಾ ವರದಿ ತಯಾರಿಸಿ ಗ್ರಾಮದ ಕುಡಿಯುವ ನೀರಿನ ಶುದ್ಧೀಕರಣಕ್ಕೆ 50ರಿಂದ 60 ಲಕ್ಷ ರೂಪಾಯಿ ಖರ್ಚಾಗಬಹುದೆಂದು ಅಂದಾಜು ಮಾಡಿ ಪ್ರಕಾಶ್ ರೈ ಅವರಿಗೆ ವರದಿ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಪ್ರಕಾಶ್ ರೈ ಅವರಿಂದ ಯಾವ ಪ್ರತಿಕ್ರಿಯೆಯೂ ಇದುವರೆಗೆ ಬಂದಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಪ್ರಕಾಶ್ ರೈಯವರು ಕಳೆದ ಜನವರಿಯಲ್ಲಿ ಆಶ್ವಾಸನೆ ನೀಡಿದ್ದರು. ಅವರ ಕೆಲಸದ ಒತ್ತಡದಿಂದಾಗಿ ಅವರಿಗೆ ಬರಲಾಗಲಿಲ್ಲವೇನೋ? ಗ್ರಾಮಸ್ಥರಿಗೆ ಮಾತ್ರ ಭ್ರಮನಿರಸನವಾಗಿದೆ ಎಂದು ಗ್ರಾಮದ ಉಪನ್ಯಾಸಕ ರಮೇಶ್ ಹೇಳುತ್ತಾರೆ.

ಸಿನಿಮಾ ಚಿತ್ರೀಕರಣದ ಕೆಲಸದಿಂದಾಗಿ ಗ್ರಾಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ ಎಂದು ಪ್ರಕಾಶ್ ರೈ ಇತ್ತೀಚೆಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ್ದರು. ಅಶುದ್ಧ ನೀರು ಕುಡಿಯುವುದರಿಂದ ಗ್ರಾಮಸ್ಥರು  ಮೂಳೆ ಸಂಬಂಧಿ ರೋಗಗಳಿಂದ ಬಳಲುತ್ತಿದ್ದು ಬೋರ್ ವೆಲ್ ನೀರು ಕುಡಿಯುವುದರಿಂದಲೂ ಹಲವು ದೀರ್ಘಾವಧಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಲ್ಲಿನ ಸ್ಥಳೀಯ ಆಡಳಿತ ಸಮಸ್ಯೆ ಬಗೆಹರಿಯುವವರೆಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಂಡುಹಿಡಿಯಬೇಕಿದೆ ಎಂದು ರೈ ಹೇಳಿದ್ದರು.

ಚಿತ್ರದುರ್ಗದ ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತೆ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಅಧಿಕ ಫ್ಲೋರೈಡ್ ನಿಂದಾಗಿ ಬಂಡ್ಲರಹಟ್ಟಿ ಗ್ರಾಮದ ಕುಡಿಯುವ ನೀರು ಮಲಿನವಾಗಿದೆ. ಇದರಿಂದ ಗ್ರಾಮಸ್ಥರು ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಮದ 5 ಭಾಗಗಳಲ್ಲಿ ಇತ್ತೀಚೆಗೆ ಅಂತರ್ಜಲದ ಸಮೀಕ್ಷೆ ನಡೆಸಿದಾಗ ಇದರಲ್ಲಿ ಸೇರ್ಪಡೆಯಾಗಿರುವ ಫ್ಲೋರೈಡ್ 2.59, 1.29, 1.40 ಮತ್ತು 2.50 ಪಿಪಿಎಂಗಳಾಗಿವೆ. ಅನುಮತಿಯ ಮಟ್ಟ 1.40 ಪಿಪಿಎಂಗಳು.

ಇಲಾಖೆಯ ಎಂಜಿನಿಯರ್ ಸಾಜಿದಾ ಹೇಳುವ ಪ್ರಕಾರ, 5 ಬೋರ್ ವೆಲ್ ಗಳಲ್ಲಿ 2 ಬತ್ತಿಹೋಗಿವೆ. ಇನ್ನೆರಡು ಬತ್ತಿಹೋಗುವ ಸ್ಥಿತಿಯಲ್ಲಿವೆ. ಒಂದು ಬೋರ್ ವೆಲ್ ನಲ್ಲಿ ಮಾತ್ರ ಸಾಕಷ್ಟು ನೀರು ಇದೆ. ಗ್ರಾಮದ ನೀರು ಅತ್ಯಂತ ಮಲಿನವಾಗಿದ್ದು ಕುಡಿಯಲು ಯೋಗ್ಯವಲ್ಲ ಎಂದು ಅಂತರ್ಜಲ ವಿಶೇಷ ತಜ್ಞ ಎನ್ ದೇವರಾಯ ರೆಡ್ಡಿ ಹೇಳುತ್ತಾರೆ. ಬಾಹ್ಯನೀರು ಒದಗಿಸುವ ಮೂಲಕ ಕಲುಷಿತ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com