ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಎಚ್‌ಎಎಲ್‌ ಗೆ ಕೇಂದ್ರ ಅವಮಾನ: ರಾಹುಲ್ ಗಾಂಧಿ

ದೇಶದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಬೆಂಗಳೂರಿನ ಎಚ್ ಎಎಲ್ ಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಬೆಂಗಳೂರು: ದೇಶದ ವೈಮಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಬೆಂಗಳೂರಿನ ಎಚ್ ಎಎಲ್ ಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಆರೋಪಿಸಿದ್ದಾರೆ.
ರಾಫೆಲ್ ವಿವಾದದ ಹಿನ್ನೆಲೆಯಲ್ಲಿ ಇಂದು ನಗರದ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಎಚ್ ಎಎಲ್  ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಇಲ್ಲಿಗೆ ಬಂದು ಮಾತನಾಡುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್ ಎಎಲ್ ಕೊಡುಗೆ ಅಪಾರವಾದುದು. ಎಚ್ ಎಎಲ್ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಮಾತ್ರ ಎಚ್ ಎಎಲ್ ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎಂದೇ ಪ್ರತಿಪಾದಿಸುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅನುಭವಿ ಕಂಪನಿಗೆ ರಾಫೆಲ್ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ನೀಡುವ ಬದಲು ಅನುಭವ ಇಲ್ಲದ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.
ಕೇಂದ್ರ  ಸರ್ಕಾರ ನಿಮಗೆ ಅವಮಾನ ಮಾಡಿದೆ. ಇದಕ್ಕಾಗಿ ಅವರು ನಿಮ್ಮ ಬಳಿ ಕ್ಷಮೆ ಕೇಳಬೇಕು. ಆದರೆ ಅವರು ಕೇಳುವುದಿಲ್ಲ. ಕೇಂದ್ರ ಸರ್ಕಾರದ ಪರವಾಗಿ ನಾನು ನಿಮ್ಮ ಕ್ಷಮೆ ಕೇಳುತ್ತೇನೆ . ನಿಮಗೆ ಆಗಿರುವ ಅವಮಾನವನ್ನು ನಾವು ಸರಿ ಮಾಡುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
ಎಚ್ ಎಎಲ್ ಗೆ ಯುದ್ಧ ವಿಮಾನ ತಯಾರಿಸುವ ಶಕ್ತಿ ಇಲ್ಲವೇ? ದೇಶಕ್ಕೆ ಎಚ್ ಎಎಲ್ ಕೊಡುಗೆ ಎಷ್ಟಿದೆ ಎಂಬಿತ್ಯಾದಿ ಹಲವಾರು ವಿಷಯಗಳ ಕುರಿತು ರಾಹುಲ್ ಗಾಂಧಿ ನಿವೃತ್ತ ನೌಕರರ ಜೊತೆ ಸಂವಾದ ನಡೆಸುವ ಮೂಲಕ ಮಾಹಿತಿ ಪಡೆದರು.
ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಎಚ್ ಎಎಲ್ ನಿವೃತ್ತ ನೌಕರರೊಬ್ಬರು, ಬೈಸಿಕಲ್ ಸಹ ನಿರ್ಮಿಸಲು ಬಾರದ ಸಂಸ್ಥೆಗೆ ರಾಫೆಲ್‌ ನಿರ್ಮಿಸಲು ಕೊಟ್ಟಿದ್ದಾರೆ. ಇದು ಎಚ್‌ಎಎಲ್‌ ಗೆ ಮಾಡಿದ ದೊಡ್ಡ ಅವಮಾನ. ನಮ್ಮದು ಗೌರವಾನ್ವಿತ ಸಂಸ್ಥೆ ಆದರೆ ಸರ್ಕಾರ ನಮಗೆ ಮೋಸ ಮಾಡಿತು ಎಂದರು. 

ನಿರ್ಮಲಾ ಸೀತಾರಾಮನ್‌ ಅವರು ಜೆಟ್‌ ಹಾರಾಟ ನಡೆಸಿದ ಮೊದಲ ರಕ್ಷಣಾ ಮಂತ್ರಿ ಎನಿಸಿಕೊಂಡರು. ಆದರೆ ಅವರು ಹಾರಿದ್ದು ಎಚ್‌ಎಎಲ್‌ ತಯಾರಿಸಿದ ಜೆಟ್‌ ವಿಮಾನದಲ್ಲಿ ಎಂಬುದನ್ನು ಅವರು ನೆನೆಪಿಸಿಕೊಂಡು ಆ ನಂತರ ಎಚ್‌ಎಎಲ್‌ ಮೇಲೆ ಆರೋಪ ಮಾಡಬೇಕಿತ್ತು ಎಂದು ಮತ್ತೊಬ್ಬ ನಿವೃತ್ತ ಎಚ್‌ಎಎಲ್‌ ಎಂಜಿನಿಯರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com