ಸಸಿಗಳನ್ನು ನೆಟ್ಟು ಪೋಷಿಸಿದರೆ ಸರ್ಕಾರಿ ಶಾಲೆ ಮಕ್ಕಳಿಗೆ ಸಿಗುತ್ತೆ ಪರೀಕ್ಷೆಯಲ್ಲಿ ಅಂಕ!

ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಮುಂದೆ 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಚೆನ್ನಾಗಿ ಪೋಷಿಸಿದರೆ ಅಂಕಗಳನ್ನು ಪಡೆಯಬಹುದು. ಅರಣ್ಯ, ಪರಿಸರ ಮತ್ತು ಜೈವಿಕ ಇಲಾಖೆ ಈ ಸಂಬಂಧ ಸದ್ಯದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ.

ಈ ಕುರಿತು ಮಾಹಿತಿ ನೀಡಿದ ಅರಣ್ಯ ಖಾತೆ ಸಚಿವ ಆರ್ ಶಂಕರ್, ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವುದು ಮತ್ತು ಗಿಡ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡು ಇಂದಿನ ಮಕ್ಕಳಲ್ಲಿ ಗಿಡ ಮರ ಮತ್ತು ಪ್ರಕೃತಿ ಮೇಲೆ ಒಲವು ಹೆಚ್ಚಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ, 8ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ 10 ಗಿಡಗಳನ್ನು ನೀಡಲಾಗುತ್ತದೆ. ಮಕ್ಕಳು ಈ ಗಿಡಗಳನ್ನು ತಮ್ಮ ಶಾಲೆ, ಮನೆ ಆವರಣ ಅಥವಾ ರಸ್ತೆ ಬದಿ ಕೂಡ ನೆಡಬಹುದು. ಗಿಡ ನೆಟ್ಟು ಬಿಟ್ಟರೆ ಸಾಕಾಗುವುದಿಲ್ಲ, ಅದನ್ನು ಮುಂದಿನ ಮೂರು ವರ್ಷಗಳ ಕಾಲ ಬೆಳೆಸುವ ಕೆಲಸ ಕೂಡ ಅವರದ್ದು.

ವಿದ್ಯಾರ್ಥಿಗಳು 10ನೇ ತರಗತಿಗೆ ತಲುಪಿದಾಗ ಎಷ್ಟು ಗಿಡಗಳು ಉಳಿಯುತ್ತವೆ ಎಂದು ನೋಡಿಕೊಂಡು ಅಂಕಗಳನ್ನು ನೀಡಲಾಗುತ್ತದೆ.ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ 6 ತಿಂಗಳಿಗೊಮ್ಮೆ ಗಿಡಗಳನ್ನು ಪರೀಕ್ಷೆ ಮಾಡುತ್ತಾರೆ. ಗಿಡ ನೆಟ್ಟು 3ನೇ ವರ್ಷ ವಿದ್ಯಾರ್ಥಿ ಎಲ್ಲಾ 10 ಗಿಡಗಳನ್ನು ಉಳಿಸಿಕೊಂಡರೆ ಆ ವಿದ್ಯಾರ್ಥಿಗೆ 10 ಇಂಟರ್ನಲ್ ಮಾರ್ಕ್ಸ್ ಸಿಗುತ್ತದೆ ಎಂದರು ಸಚಿವ ಶಂಕರ್.

ಮಕ್ಕಳಿಗೆ ಮಾವು, ಸೀಬೆಹಣ್ಣಿನ ಗಿಡ, ಕಸ್ಟರ್ಡ್ ಆಪಲ್, ಚಿಕ್ಕೂ, ಹಲಸಿನ ಗಿಡ, ಬೇವು, ಜಾಮೂನು ಮತ್ತು ಮುಳ್ಳಿನಹಣ್ಣು ಗಿಡಗಳನ್ನು ನೆಡಲು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಗಿಡ ನೀಡಿದ ನಂತರ ಗುರುತಿಗಾಗಿ ಅದರ ಫೋಟೋ ತೆಗೆದುಕೊಳ್ಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com