ಕರ್ನಾಟಕದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಇನ್ನು ಮುಂದೆ ಖಾಕಿ ಪ್ಯಾಂಟ್, ಶರ್ಟ್ ಸಮವಸ್ತ್ರ ಮಾತ್ರ!

ಇನ್ನು ಮುಂದೆ ರಾಜ್ಯದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಮಾನದಂಡದ ಖಾಕಿ ಸಮವಸ್ತ್ರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇನ್ನು ಮುಂದೆ ರಾಜ್ಯದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಮಾನದಂಡದ ಖಾಕಿ ಸಮವಸ್ತ್ರ ಕಡ್ಡಾಯವಾಗಲಿದೆ. ಖಾಕಿ ಬಣ್ಣದ ಪ್ಯಾಂಟ್, ಶರ್ಟ್, ಬೆಲ್ಟ್ ಮತ್ತು ಬೂಟ್ಸ್ ಕಡ್ಡಾಯವಾಗಲಿದೆ. ಕೆಲವು ಮಹಿಳೊ ಪೊಲೀಸ್ ಸಿಬ್ಬಂದಿ ಖಾಕಿ ಬಣ್ಣದ ಸೀರೆ ಧರಿಸುತ್ತಿದ್ದರು. ಆದರೆ ಇನ್ನು ಮುಂದೆ ಅದಕ್ಕೆ ನಿಷೇಧವಿರುತ್ತದೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಪರಾಧ ಇತ್ಯಾದಿ ಪ್ರಕರಣಗಳಲ್ಲಿ ಮಹಿಳೊ ಪೊಲೀಸ್ ಸಿಬ್ಬಂದಿ ಶೀಘ್ರವಾಗಿ ಕಾರ್ಯಾಚರಣೆ ಮಾಡಲು ಖಾಕಿ ಸಮವಸ್ತ್ರ ಹೆಚ್ಚು ಅನುಕೂಲವಾಗುತ್ತದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಹಿಳೊ ಪೊಲೀಸ್ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಈ ಕುರಿತು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಸಭೆಯಲ್ಲಿ ಕಾನ್ಸ್ಟೇಬಲ್ ಮತ್ತು ಅದಕ್ಕಿಂತ ಮೇಲಿನ ರ್ಯಾಂಕಿನ ಮಹಿಳಾ ಪೊಲೀಸರ ಸಮವಸ್ತ್ರದ ವಿಷಯಗಳು ಕೂಡ ಚರ್ಚೆಗೆ ಬಂದವು.
ಮಹಿಳಾ ಪೊಲೀಸ್ ಸಿಬ್ಬಂದಿ ಸೀರೆ ಧರಿಸಿದಾಗ ಮತ್ತು ಪ್ಯಾಂಟ್, ಶರ್ಟ್ ನಲ್ಲಿರುವಾಗ ಆರೋಪಿಗಳನ್ನು ಓಡಿಸಿಕೊಂಡು ಹಿಡಿಯುವಾಗಿನ ಸಾಮರ್ಥ್ಯದ ಬಗ್ಗೆ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಿತು. ಚೈನು ಕಳ್ಳರನ್ನು ಸೀರೆ ಧರಿಸಿದರೆ ಅಟ್ಟಾಡಿಸಿಕೊಂಡು ಹಿಡಿಯಲು ಕಷ್ಟವಾಗುತ್ತದೆ, ಹೀಗಾಗಿ ಪ್ಯಾಂಟ್, ಶರ್ಟ್ ಧರಿಸಿದರೆ ಉತ್ತಮ ಎಂದು ಸಭೆಯಲ್ಲಿ ತೀರ್ಮಾನಿಸಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ನೀಲಮಣಿ ಎನ್ ರಾಜು ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯದ ವೇಳೆ ಇನ್ನೂ ವೃತ್ತಿಪರರಾಗಿ ಕಾಣಿಸಲು ಸಹ ಈ ತೀರ್ಮಾನವಾಗಿದೆ. ಕೇವಲ ಸಮವಸ್ತ್ರವಲ್ಲದೆ ಕೂದಲನ್ನು ಬನ್ ನಂತೆ ಕಟ್ಟಬೇಕು, ಕೂದಲಿಗೆ ಬಣ್ಣ ಹಚ್ಚುವುದು, ಅದನ್ನು ಇಷ್ಟಬಂದಂತೆ ಬಾಚಿ ಕಟ್ಟುವಂತಿಲ್ಲ, ಹೂವು ಮುಡಿಯುವಂತಿಲ್ಲ ಮತ್ತು ಮೇಕಪ್ ಹಾಕಿಕೊಳ್ಳುವಂತಿಲ್ಲ. ಈ ಆದೇಶವನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗುತ್ತದೆ. ಸಮವಸ್ತ್ರ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತಾಲಯದ ಹಿರಿಯ ಅಧಿಕಾರಿಯೊಬ್ಬರು, ಗರ್ಭಿಣಿ ಪೊಲೀಸ್ ಸಿಬ್ಬಂದಿಗೆ ಕೆಲವು ವಿನಾಯ್ತಿಗಳಿರುತ್ತವೆ. ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಲು ಅವಕಾಶ ನೀಡಲಾಗುತ್ತದೆ. ಉಳಿದ ಎಲ್ಲಾ ಸಮಯಗಳಲ್ಲಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.
ಪೊಲೀಸ್ ಇಲಾಖೆಯ ಈ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ವೃತ್ತಿಯ ದೃಷ್ಟಿಯಿಂದ ನಮಗೆ ಈ ನಿಯಮ ಒಳ್ಳೆಯದು ಎನ್ನುತ್ತಾರೆ ಈಶಾನ್ಯ ವಿಭಾಗದ ಮಹಿಳಾ ಸಬ್ ಇನ್ಸ್ ಪೆಕ್ಟರ್ ವೊಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com