63 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಿದ್ಧ: ಸಚಿವೆ ಜಯಮಾಲಾ

ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಈ ವರ್ಷದ ...
ಸಚಿವೆ ಜಯಮಾಲಾ
ಸಚಿವೆ ಜಯಮಾಲಾ

ಬೆಂಗಳೂರು: ನವೆಂಬರ್ 1ರ ಕನ್ನಡ ರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಈ ವರ್ಷದ ರಾಜ್ಯೋತ್ಸವ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಈಗಾಗಲೇ ಅಂತಿಮಗೊಳಿಸಿದೆ. 63 ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಸರ್ಕಾರ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ.

2016ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸರ್ಕಾರದ ಮಾನದಂಡವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಈ ಸಂದರ್ಭದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರ ಯಾವುದೇ ಮಾರ್ಗಸೂಚಿ ಅಥವಾ ಸಮಿತಿಯನ್ನು ರಚಿಸಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿತ್ತು.

ನಂತರ ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಆಯ್ಕೆ ತಂಡವೊಂದನ್ನು ರಚಿಸಿತ್ತು. ಆ ತಂಡವು ರಾಜ್ಯೋತ್ಸವ ಆಚರಣೆಯ ವರ್ಷದ ಸಂಖ್ಯೆಯಷ್ಟೇ ಜನರಿಗೆ ಪ್ರತಿವರ್ಷ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವಂತೆ ಶಿಫಾರಸು ಮಾಡಿತ್ತು.

ಈ ವರ್ಷದ ಪ್ರಶಸ್ತಿ ಪುರಸ್ಕೃತರ ಆಯ್ಕೆ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ, ಈ ವರ್ಷ ರಾಜ್ಯ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಕೂಡ 63ಕ್ಕೆ ನಿಗದಿಪಡಿಸಲಾಗಿದೆ ಎಂದರು.

ಸಂಘ-ಸಂಸ್ಥೆಗಳು ಸೇರಿದಂತೆ ವ್ಯಕ್ತಿಗಳ ಆಯ್ಕೆಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಕ್ರೀಡಾಪಟುಗಳನ್ನು ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ 60 ವರ್ಷದೊಳಗಿನವರಿಗೆ ಮಾತ್ರ ಪ್ರಶಸ್ತಿ ನೀಡುತ್ತಿದ್ದೇವೆ. ಆದರೆ 60 ವರ್ಷಕ್ಕಿಂತ ಮೇಲಿನವರಿಗೆ ನೀಡಲು ಹಲವು ಶಿಫಾರಸುಗಳು ಬಂದಿವೆ. 70ರಿಂದ 80ರ ವಯೋಮಾನದ ಹಿರಿಯರಿಗೆ ಆದ್ಯತೆ ಮೇಲೆ ಕೆಲವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಸಾಕಷ್ಟು ಒತ್ತಡಗಳು ಬಂದಿವೆ. ಅದರ ಗೌರವವನ್ನು ಕಾಪಾಡಲು ನಾವು ಈಗ ಯಾವ ಪುರಸ್ಕೃತರ ಹೆಸರುಗಳನ್ನು ಕೂಡ ಬಹಿರಂಗಪಡಿಸುವುದಿಲ್ಲ. ಪ್ರತಿ ಪುರಸ್ಕೃತರಿಗೆ 20 ಗ್ರಾಂ ಚಿನ್ನದ ಪದಕ, 1 ಲಕ್ಷ ರೂಪಾಯಿ ನಗದು ಮತ್ತು ಫಲಕ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ನೀಡಲು ಆರಂಭಿಸಿದ್ದು 1966ರಲ್ಲಿ. ಕಲೆ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ಕ್ರೀಡೆ, ವೈದ್ಯಕೀಯ ಮತ್ತು ಅದ್ವಿತೀಯ ಸಾಧನೆ ಮಾಡಿದ ಸಂಘಟನೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಸಹ ನಿರ್ದಿಷ್ಟ ಮಾನದಂಡ ಅಗತ್ಯ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳುತ್ತಾರೆ.

ಕೆಲ ವರ್ಷಗಳ ಹಿಂದೆ ಕೆಂಪೇಗೌಡ ಪ್ರಶಸ್ತಿಯೆಂದರೆ ಅತ್ಯಂತ ಗೌರವದ ಪ್ರಶಸ್ತಿಯಾಗಿತ್ತು. ಕೆಲವರಿಗೆ ಮಾತ್ರ ಸಿಗುತ್ತಿತ್ತು. ಇಂದು ಅದರ ಮೌಲ್ಯ ಹೊರಟುಹೋಗಿದೆ. ಈ ವರ್ಷವಂತೂ 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ನೀಡಲಾಗಿದೆ. ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರನ್ನು ಸಹ ಆಯ್ಕೆ ಮಾಡಲು ಸಮಿತಿ ರಚಿಸಿ ಅರ್ಹರಾದವರನ್ನು ಮಾತ್ರ ಆಯ್ಕೆ ಮಾಡಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com