
ಬೆಂಗಳೂರು: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ಪರೀಕ್ಷೆಗೆ ಹಾಜರಾಗಲು ವಿಫಲವಾದ ವಿದ್ಯಾರ್ಥಿಗಳು ಆಯುಷ್ ಕೋರ್ಸ್ ಗೆ ಪ್ರವೇಶ ಪಡೆಯಬಹುದು. ಇದಕ್ಕೆ ಕಾರಣ ಇತ್ತೀಚೆಗೆ ಹೈಕೋರ್ಟ್ ಹೊರಡಿಸಿರುವ ಆದೇಶ. ಆಯುಷ್ ಕೋರ್ಸ್ ನಲ್ಲಿ ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ದ ಮತ್ತು ಹೋಮಿಯೋಪಥಿ ಒಳಗೊಂಡಿದೆ.
ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಟ್ ಪರೀಕ್ಷೆ ಬರೆಯದಿರುವ ವಿದ್ಯಾರ್ಥಿಗಳು ಕೂಡ ಆಯುಷ್ ಕೋರ್ಸ್ ಗೆ ಪ್ರವೇಶ ಪಡೆಯಬಹುದು ಎಂದು ಹೇಳಿದೆ.
ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ನೀಟ್ ಪರೀಕ್ಷೆ ಬರೆಯದಿರುವ ವಿದ್ಯಾರ್ಥಿಗಳು ನೇರವಾಗಿ ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯಬಹುದು ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ಈ ಹಿಂದೆ ಕೇಂದ್ರ ಆಯುಷ್ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಆಯುಷ್ ಕೋರ್ಸ್ ಗಳಿಗೆ ಕೂಡ ನೀಟ್ ಕಡ್ಡಾಯವಾಗಿತ್ತು. ಆದರೆ ಕಾಲೇಜು ವ್ಯವಸ್ಥಾಪಕ ಮಂಡಳಿ, ಕೇವಲ ನೀಟ್ ಪರೀಕ್ಷೆ ಬರೆದು ಅರ್ಹತೆ ಗಳಿಸಿದ ವಿದ್ಯಾರ್ಥಿಗಳಿಂದ ಕಾಲೇಜುಗಳಲ್ಲಿ ಸೀಟು ಭರ್ತಿಯಾಗುವುದಿಲ್ಲ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಆಯುಷ್ ಕೋರ್ಸ್ ಗಳಿಗೆ ನೀಟ್ ಪರೀಕ್ಷೆ ಬರೆಯದಿರುವ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆಯಬಹುದು ಎಂದು ಹೈಕೋರ್ಟ್ ಆದೇಶ ನೀಡಿತ್ತು.
Advertisement