ಸಮಾನ ವೇತನಕ್ಕೆ ಆಗ್ರಹ: ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಂದ ಇಂದು ಮುಷ್ಕರ

ಖಾಯಂ ನೌಕರರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಯಂ ನೌಕರರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್(ಎನ್ಎಚ್ ಎಂ)ನ ಗುತ್ತಿಗೆ ನೌಕರರು ಗುರುವಾರ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಸುಮಾರು 28 ಸಾವಿರ ಗುತ್ತಿಗೆ ನೌಕರರು ಇಂದು ಮುಷ್ಕರ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಮುಷ್ಕರ ನಡೆಸುತ್ತಿರುವ ಗುತ್ತಿಗೆ ನೌಕರರಲ್ಲಿ ಸಹಾಯಕ ನರ್ಸ್ ಮಿಡ್ ವೈವ್ಸ್ (ANM ಗಳು), ಸಿಬ್ಬಂದಿ ದಾದಿಯರು, ವೈದ್ಯರು, ಪ್ರಯೋಗಾಲಯ ತಂತ್ರಜ್ಞರು ಮತ್ತು ಔಷಧ ವಿತರಣೆಗಾರರು ಸೇರಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಆರ್​.ಎಚ್​.ಎಂ) ಅಡಿಯಲ್ಲಿ  22 ಸಾವಿರ ಹಾಗೂ  ಇನ್ನಿತರ ಕಾರ್ಯಕ್ರಮದಡಿ 8 ಸಾವಿರ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 30 ಸಾವಿರ  ನೌಕರರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಆಯಾ ಜಿಲ್ಲೆಗಳಲ್ಲಿ  ಬೆಳಿಗ್ಗೆ 9 ಗಂಟೆಗೆ ಜಾಥಾ ನಡೆಸಿ 10 ಗಂಟೆಯಿಂದ ಸಂಜೆ 5.30 ವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ.

ಆದರೆ ಇದಕ್ಕೆ ಸರ್ಕಾರದಿಂದ ವಿರೋಧವಿರುವುದರಿಂದ ಇಂದು ಮುಷ್ಕರದಲ್ಲಿ ಪಾಲ್ಗೊಳ್ಳುವ ಎಲ್ಲಾ ನೌಕರರನ್ನು ಕರ್ತವ್ಯಕ್ಕೆ ಗೈರಾಗಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಎಲ್ಲಾ ತಾಲ್ಲೂಕುಗಳಿಗೆ ನೊಟೀಸ್ ಕಳುಹಿಸಿದ್ದಾರೆ. ಯಾವುದೇ ಖಾಯಂ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ರಜೆ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ರತ್ನನ್ ಕೆಲ್ಕರ್, ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ 22 ಸಾವಿರ ವೈದ್ಯರು ಮತ್ತು ದಾದಿಯರನ್ನೊಳಗೊಂಡ ಸಿಬ್ಬಂದಿಯಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಸಹಾಯಕ ದಾದಿಯರು ತಿಂಗಳಿಗೆ 10 ಸಾವಿರ ವೇತನ ಪಡೆಯುತ್ತಾರೆ, ಆದರೆ ಖಾಯಂ ನೌಕರರು ತಿಂಗಳಿಗೆ 14 ಸಾವಿರದಿಂದ 16 ಸಾವಿರದವರೆಗೆ ಪಡೆಯುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಿಬ್ಬಂದಿ ವಾರ್ಷಿಕವಾಗಿ ಶೇಕಡಾ 5ರಷ್ಟು ವೇತನ ಹೆಚ್ಚಳ ಸೌಲಭ್ಯ ಪಡೆಯುತ್ತಾರೆ. ಈ ತಾರತಮ್ಯವನ್ನು ಸರಿಪಡಿಸುವಂತೆ ನಾವು ಒತ್ತಾಯಿಸುತ್ತಿದ್ದು ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ಖಂಡಿತಾ ವ್ಯತ್ಯಯವಾಗಲಿದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com