ಎರಡು ಗುಂಪುಗಳ ಮಧ್ಯೆ ಘರ್ಷಣೆ: ಇಂದು ಕುಕ್ಕೆ ಸುಬ್ರಹ್ಮಣ್ಯ ಬಂದ್

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನ...
ಕುಕ್ಕೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿರುವ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನ ನಡುವಿನ ಸಂಘರ್ಷ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಗುರುವಾರ ಇಲ್ಲಿನ ವರ್ತಕರು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದಾರೆ.ಇದರಿಂದ ಸಾರ್ವಜನಿಕ ಭಕ್ತರಿಗೆ ಇಂದು ದೇವರ ದರ್ಶನಕ್ಕೆ ವ್ಯತ್ಯಯವಾಗಲಿದೆ.

ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಮಠ ಮತ್ತು ದೇವಸ್ಥಾನದ ನಡುವಣ ಸಂಘರ್ಷ ಮೊನ್ನೆ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ವಾಟ್ಸಾಪ್ ಗ್ರೂಪ್ ಒಂದರಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು. ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಬೆಂಬಲಿಗ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಳು.

 ಈ ಸಂದರ್ಭದಲ್ಲಿ ಚೈತ್ರಾಳನ್ನು ಪ್ರಶ್ನೆ ಮಾಡಲು ಬಂದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಚೈತ್ರಾ ತಂಡದವರ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆಯಿತು. ಘರ್ಷಣೆಯಲ್ಲಿ ಕೆಲವರಿಗೆ ಗಾಯವಾಗಿದೆ. ಚೈತ್ರಾ ಮತ್ತು ಅವರ ಬೆಂಬಲಿಗರು ಕಬ್ಬಿಣದ ತುಂಡು ಹಿಡಿದುಕೊಂಡು ಹಿಂದೂ  ಜಾಗರಣ ವೇದಿಕೆಯ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಚಾರ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಲಾಠಿ ಚಾರ್ಜ್ ನಡೆಸಿ ಎರಡು ಗುಂಪನ್ನು ಚದುರಿಸಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಗುರುಪ್ರಸಾದ್ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದ್ದ ಪೊಲೀಸರು ಸುಮಾರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಚೈತ್ರಾ ಮತ್ತು ಗ್ಯಾಂಗ್ ಸದಸ್ಯರನ್ನು ಬಂಧಿಸಬೇಕೆಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೆ ಇಲ್ಲಿನ ವರ್ತಕರು ಸ್ವಯಂಪ್ರೇರಿತರಾಗಿ ಕುಕ್ಕೆ ಸುಬ್ರಹ್ಮಣ್ಯ ಬಂದ್‍ಗೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com