ಬೆಂಗಳೂರು: ಡಿಸೆಂಬರ್ ಒಳಗೆ ಮನೆ ಬಾಡಿಗೆ ಕಟ್ಟಿ, ಇಲ್ಲವೆ ಮನೆ ಖಾಲಿ ಮಾಡಿ ಎಂದು ರಾಕಿಂಗ್ ಸ್ಟಾರ್ ಯಶ್ ಅವರ ತಾಯಿಗೆ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ.
ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಯಶ್ ತಾಯಿ ಪುಷ್ಪಾ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೋಪಣ್ಣ ಹಾಗೂ ಶ್ರೀನಿವಾಸ್ ಹರೀಶ್ ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಕೆಳ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.
ಯಶ್ ತಾಯಿಗೆ 23.27 ಲಕ್ಷ ರು. ಬಾಡಿಗೆ ಪಾವತಿಸುವಂತೆ ಸೂಚನೆ ನೀಡಿರುವ ನ್ಯಾಯಾಲಯ, ತಕ್ಷಣ ಪಾವತಿಸಿದರೆ ಮುಂದಿನ ಮಾರ್ಚ್ 31ರ ವರೆಗೆ ಇರಬಹುದು. ಇಲ್ಲವಾದಲ್ಲಿ ಡಿಸೆಂಬರ್ ಒಳಗೆ ಬಾಡಿಗೆ ಕಟ್ಟಿ ಮನೆ ಖಾಲಿ ಮಾಡುವಂತೆ ಆದೇಶಿಸಿದೆ.
2010ರ ಅಕ್ಟೋಬರ್ 16ರಿಂದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿರುವ ಯಶ್ ಮತ್ತು ಅವರ ಕುಟುಂಬ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಮತ್ತು ಮನೆ ಬಾಡಿಗೆ ಬಾಕಿ 9 ಲಕ್ಷ 60 ಸಾವಿರ ಮನೆ ಮಾಲೀಕರಿಗೆ ಪಾವತಿಸುವಂತೆ ಆದೇಶಿಸಿತ್ತು. ಆದರೆ ಪುಷ್ಪ ಅವರು ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.