
ಬೆಂಗಳೂರು: ಉತ್ತರ ಕರ್ನಾಟಕ ವಿರೋಧಿ ಎಂಬ ಆರೋಪದಿಂದ ಮುಕ್ತವಾಗಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದೀಗ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕೃಷ್ಣ ಭಾಗ್ಯ ಜಲನಿಗಮ ಲಿಮಿಟೆಡ್ ಬೆಂಗಳೂರಿನಿಂದ ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ನ್ನು ಉತ್ತರ ಕರ್ನಾಟಕದ ಸರಿಯಾದ ಸ್ಥಳವೊಂದಕ್ಕೆ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದ್ದು ಆ ಕಾರ್ಯ ಸದ್ಯದಲ್ಲಿಯೇ ನಡೆಯಲಿದೆ. ರಾಜ್ಯ ಸಚಿವ ಸಂಪುಟ ಈ ಕುರಿತು ನಿನ್ನೆ ಮಹತ್ವದ ನಿರ್ಧಾರ ಕೈಗೊಂಡಿತು.
ಇದಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನಿನ್ನೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದ್ದು ಅದರಲ್ಲಿ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಳಿಸಬಹುದಾದ ಇಲಾಖೆಗಳನ್ನು ಗುರುತಿಸಿದೆ.
ಸಮಿತಿಯು ತನ್ನ ವರದಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಪುರಾತತ್ವ ವಸ್ತುಸಂಗ್ರಹಾಲಯ ಇಲಾಖೆ, ಕಬ್ಬು ಅಭಿವೃದ್ಧಿ ನಿರ್ದೇಶನಾಲಯ, ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ, ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯನ್ನು ಉತ್ತರ ಮತ್ತು ದಕ್ಷಿಣವಾಗಿ ವಿಭಜನೆ ಮಾಡಲು ಶಿಫಾರಸು ಮಾಡಿದೆ.
Advertisement