ಖಾಸಗಿ ಸಂಸ್ಥೆ ಸಹಯೋಗದಲ್ಲಿ ಬಿಡಿಎ ನಿವೇಶನ ಅಭಿವೃದ್ಧಿಗೆ ಸರ್ಕಾರ ಮುಂದು

ಖಾಸಗಿ ನಿರ್ಮಾಣ ಸಂಸ್ಥೆಗಳ ಜೊತೆಗೂಡಿ ವಸತಿ ಲೇ ಔಟ್ ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಖಾಸಗಿ ನಿರ್ಮಾಣ ಸಂಸ್ಥೆಗಳ ಜೊತೆಗೂಡಿ ವಸತಿ ಲೇ ಔಟ್ ಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿಪಡಿಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಬಿಡಿಎ ಅಧ್ಯಕ್ಷರೂ ಕೂಡ ಆಗಿರುವ ಪರಮೇಶ್ವರ್ ಅವರು ಸುದ್ದಿಗಾರರಿಗೆ ನಿನ್ನೆ ಬೆಂಗಳೂರಿನಲ್ಲಿ ಈ ಮಾಹಿತಿ ನೀಡಿ ಖಾಸಗಿ ಸಂಸ್ಥೆಗಳ ಜೊತೆ ವಸತಿ ಲೇ ಔಟ್ ಗಳನ್ನು ಅಭಿವೃದ್ಧಿಪಡಿಸುವಾಗ ಉಂಟಾಗುವ ನಷ್ಟವನ್ನು ಬಿಡಿಎ ಭರಿಸುವುದಿಲ್ಲ, ಬಿಡಿಎ ಈಗಾಗಲೇ ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಿದರು.

ಬಿಡಿಎ ಅಧಿಕಾರಿಗಳೊಂದಿಗೆ ಅವರು ಇದಕ್ಕೂ ಮುನ್ನ ಚರ್ಚೆ ನಡೆಸಿ ಪ್ರಾಧಿಕಾರವನ್ನು ಮತ್ತೆ ಲಾಭದತ್ತ ಕೊಂಡೊಯ್ಯುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಯಿತು. ವಸತಿ ನಿವೇಶನಗಳನ್ನು ಮಾರಾಟ ಮಾಡಿ ಬರುವ ಹಣವನ್ನು ಹಂಚಿಕೆ ಮಾಡುವ ಮೂಲಕ ಬಿಡಿಎಯನ್ನು ಮತ್ತೆ ಲಾಭದ ಸಂಸ್ಥೆಯನ್ನಾಗಿ ಮಾಡಬಹುದು. ಖಾಸಗಿ ಸಹಭಾಗಿತ್ವದಿಂದ ವಸತಿ ನಿವೇಶನಗಳ ಅಭಿವೃದ್ಧಿ ಮತ್ತು ಮಾರಾಟ ತ್ವರಿತವಾಗಿ ನಡೆಯುವುದು ಮಾತ್ರವಲ್ಲದೆ ನಿವೇಶನಗಳ ಮಾಲೀಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದರು.

ಹೀಗಾಗಿ ಸಭೆಯಲ್ಲಿ ಖಾಸಗಿ ಸಹಭಾಗಿತ್ವದ ಆಡಳಿತ ನಡೆಸಲು ಕರಡು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಿಡಿಎ ಅಪಾರ್ಟ್ ಮೆಂಟ್ ಗಳು ಮತ್ತು ವಸತಿ ನಿವೇಶನಗಳನ್ನು ಮಾರಾಟ ಮಾಡಲು ಅರ್ಹತಾ ಷರತ್ತುಗಳಲ್ಲಿ ವಿನಾಯ್ತಿ ನೀಡಬೇಕೆಂದು ಕೂಡ ನಿರ್ಧರಿಸಲಾಯಿತು.

ಪ್ರಸ್ತುತ ಬೆಂಗಳೂರಿನಲ್ಲಿ ಭೂಮಿ ಹೊಂದಿರುವವರು ಮತ್ತು ಕಳೆದ 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸದೇ ಇರುವವರು ಬಿಡಿಎ ನಿವೇಶನಗಳನ್ನು ಖರೀದಿಸಲು ಅನರ್ಹರಾಗಿದ್ದಾರೆ. ಬಿಡಿಎ ನಿವೇಶನ ಕೊಂಡರೆ ಅದನ್ನು 5 ವರ್ಷಗಳಿಗೆ ಮಾರಾಟ ಮಾಡಲು ಆಗುವುದಿಲ್ಲ ಹಾಗೂ ಇತರ ಕೆಲವೊಂದು ಅರ್ಹತಾ ಷರತ್ತುಗಳಲ್ಲಿ ವಿನಾಯ್ತಿ ನೀಡಿದರೆ ಬಿಡಿಎ ನಿವೇಶನಗಳನ್ನು ಕೊಳ್ಳುವವರ ಸಂಖ್ಯೆ ಅಧಿಕವಾಗಬಹುದು ಎಂದು ಬಿಡಿಎ ಸದಸ್ಯರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬನಶಂಕರಿ 6ನೇ ಹಂತ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿ ಬಿಡಿಎ ನಿವೇಶನ ಕಾಲೊನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಕೂಡ ಚರ್ಚೆ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com