ಬೆಂಗಳೂರು: ಖಾಸಗಿ ಕಂಪೆನಿಯ ಭದ್ರತಾ ಸಿಬ್ಬಂದಿ ಖಾಸಗಿ ಶಾಲೆಯೊಂದರ ಹೌಸ್ ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಅತ್ಯಾಚಾರಗೈದ ಘಟನೆ ಮಾರತಹಳ್ಳಿ ಸಮೀಪ ಕಾಡುಬೀಸನಹಳ್ಳಿಯಲ್ಲಿ ನಡೆದಿದೆ. ತನ್ನ ಮನೆಗೆ ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದಾನೆ.
ಯುವತಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಸ್ಸಾಂ ಮೂಲದ ಯುವತಿ ಶಾಲೆಯ ಆವರಣದ ಮನೆಯೊಂದರಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಕಳೆದ ಗುರುವಾರ ರಾತ್ರಿ ಭದ್ರತಾ ಸಿಬ್ಬಂದಿ ನಾಸುರುಲ್ಲಾ ಹುಸೇನ್(28 ವರ್ಷ) ಆಕೆಯ ಮನೆಗೆ ಬಂದಾಗ ಒಬ್ಬಳೇ ಇದ್ದಳು. ಚಾಕುವಿನಿಂದ ಆಕೆಯನ್ನು ಬೆದರಿಸಿ ತನ್ನ ಮನೆಗೆ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಆತನ ಮನೆ ಯುವತಿ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ.
ಮನೆಗೆ ಎಳೆದೊಯ್ದು ಬಾಗಿಲು ಹಾಕಿ ಅತ್ಯಾಚಾರ ಮಾಡಿ ವಿಷಯವನ್ನು ಬಹಿರಂಗಪಡಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ. ಆಕೆ ಗಾಬರಿಯಿಂದ ಶಾಲೆಗೆ ಬಂದು ಅಲ್ಲಿನ ಸಿಬ್ಬಂದಿಗೆ ವಿಷಯ ತಿಳಿಸಿದ್ದಾಳೆ. ಅವರು ಮಾರತಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ಗೊತ್ತಾಗುತ್ತಿದ್ದಂತೆ ಹುಸೇನ್ ತಪ್ಪಿಸಿಕೊಂಡಿದ್ದಾನೆ.
Advertisement