ಯಕ್ಷಗಾನ ಅಕಾಡಮಿ ಪ್ರಶಸ್ತಿ ಪ್ರಕಟ: ಮೂಡಬಿದಿರೆ ಬಲಿಪ ನಾರಾಯಣರಿಗೆ ಪಾರ್ತಿಸುಬ್ಬ ಪುರಸ್ಕಾರ

ಪ್ರಸಕ್ತ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿಗಳು ಪ್ರಕಟವಾಗಿದ್ದು ಮೂಡಬಿದಿರೆಯ ಹಿರಿಯ ಯಕ್ಷಗಾನ ಪ್ರಸಂಗ ಕರ್ತೃ ಬಲಿಪ ನಾರಾಯಣರಿಗೆ ಪಾರ್ತಿಸುಬ್ಬ ಪುರಸ್ಕಾರ ಲಭಿಸಿದೆ.
ಬಲಿಪ ನಾರಾಯಣ
ಬಲಿಪ ನಾರಾಯಣ
ಬೆಂಗಳೂರು: ಪ್ರಸಕ್ತ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿಗಳು ಪ್ರಕಟವಾಗಿದ್ದು ಮೂಡಬಿದಿರೆಯ ಹಿರಿಯ ಯಕ್ಷಗಾನ ಪ್ರಸಂಗ ಕರ್ತೃ ಬಲಿಪ ನಾರಾಯಣರಿಗೆ ಪಾರ್ತಿಸುಬ್ಬ ಪುರಸ್ಕಾರ ಲಭಿಸಿದೆ.
ಮದ್ದಳೆ ವಾದಕರಾದ ಶಂಕರ ಭಾಗವತ, ತಾಳಮದ್ದಳೆ ಅರ್ಥಗಾರಿಕೆಯ ಬರೆ ಕೇಶವ ಭಟ್ಟ, ಬಡಗತಿಟ್ಟು ಯಕ್ಷಗಾನ ವಿದ್ವಾಂಸ ಎಚ್. ಶ್ರೀಧರ ಹಂದೆ, ಯಕ್ಷಗಾನ ಭಾಗವತ ಎ.ಎಂ. ಶಿವಶಂಕರಯ್ಯ, ಯಕ್ಷಗಾನ ಪಾತ್ರಧಾರಿ ಕರಿಯಣ್ಣ ಅವರುಗಳಿಗೆ ಈ ಸಾಲಿನ ಗೌರವ ಪುರಸ್ಕಾರ ಲಭಿಸಿದೆ.
ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಸೋಮವಾರ ಪತ್ರಿಕಾಗೋಷ್ಥಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದಾರೆ/
ಪಾರ್ತಿಸುಬ್ಬ ಪ್ರಶಸ್ತಿಗೆ ಒಂದು ಲಕ್ಷ ರೂ. ಗೌರವ ಧನ, ವಾರ್ಷಿಕ ಗೌರವ ಪ್ರಶಸ್ತಿಗಳಿಗೆ 50 ಸಾವಿರ ರೂ. ಗೌರವ ಧನ ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.
ಬಲಿಪ ನಾರಾಯಣರ "ಬಲಿಪರ ಜಯಲಕ್ಷ್ಮೀ" (ಪ್ರಸಂಗಗಳ ಸಂಕಲನ), ಪ್ರೊ. ಜಿ.ಎಸ್. ಭಟ್ಟರ "ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ" (ಸಂಶೋಧನೆ ಗ್ರಂಥ) ಇವುಗಳನ್ನು ವಿಶೇಷ ಪುಸ್ತಕ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ತಲಾ 25 ಸಾವಿರ ರೂ. ಗೌರವ ಧನವನ್ನು ಹೊಂದಿರಲಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಇದೇ ಸೆಪ್ಟೆಂಬರ್ ಕಡೆ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.
ಪಾರ್ತಿಸುಬ್ಬ ಪ್ರಶಸ್ತಿ ಪಡೆದ ಬಲಿಪ ನಾರಾಯಣ - ಕಿರು ಪರಿಚಯ
ತೆಂಕು ತಿಟ್ಟು ಯಕ್ಷಗಾನದ ಭಾಗವತಿಕೆಯಲ್ಲಿ ಬಲಿಪ ನಾರಾಯಣ ಭಾಗವತರದು ಬಹುದೊಡ್ಡ ಹೆಸರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಮಾ.13, 1938ರಂದು ಬಲಿಪ ಮಾಧವ ಭಟ್ ಮತ್ತು ಸರಸ್ವತೀ ಅಮ್ಮನವರ ಸುಪುತ್ರರಾಗಿ ಜನಿಸಿದ ಬಲಿಪ ನಾರಾಯಣ ಏಳನೇ ತರಗತಿಯವರಿಗೆ ಓದಿದ್ದರೂ ಅವರ ಅನುಭವ, ಪಾಂಡಿತ್ಯದ ಮಟ್ಟ ಮಾತ್ರ ಎತ್ತರದ್ದು. 13ನೇ ವರ್ಷದಲ್ಲಿಯೇ ರಂಗ ಪ್ರವೇಶ ಗೈದ ಇವರು ಪಡ್ರೆ ಜಠಾಧಾರಿ ಮೇಳವನ್ನು ಕಟ್ಟಿ ನಡೆಸಿದ ಅನುಭವಿಗಳು.
50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಇರುವ ಬಲಿಪ ನಾರಾಯಣರು ಇದುವರೆಗೆ ಸುಮಾರು 30 ಪ್ರಕಟಿತ, 15 ಅಪ್ರಕಟಿತ ಪ್ರಸಂಗಗಳನ್ನು ರಚಿಸಿದ್ದಾರೆ.
ಯಕ್ಷಗಾನದ ಹಾಡುಗಾರಿಕೆ(ಭಾಗವತಿಕೆ)ಯಲ್ಲಿ ಬಲಿಪರ ಸ್ವರಕ್ಕೆ ಅದರದ್ದೇ ಆದ ಮಹತ್ವವಿದೆ. ಕಂಚಿನ ಕಂಠದ ಅವರ ಸ್ವರ, ಹಾಡುಗಾರಿಕೆಗೆಇನ್ನಷ್ಟು ಮೆರುಗು ತರುತ್ತದೆ. 50 ವರ್ಷಗಳ ಸುದೀರ್ಘ ಕಾಲದ ಭಾಗವತಿಕೆ. ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಇವರಾಗಿದ್ದಾರೆ.
ಇಂತಹಾ ಮೇರು ಕಲಾವಿದರು, ವಿದ್ವಾಂಸರಿಗೆ ಇದುವರೆಗೆ ಸಾಕಷ್ಟು ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಕೆಲವು ಹೀಗಿದೆ-
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010
ಸಾಮಗ ಪ್ರಶಸ್ತಿ 2012
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' 2003
ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ 2002
71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ 2003
ಪದವೀಧರ ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ' 2002
ಶೇಣಿ ಪ್ರಶಸ್ತಿ 2002
ಕವಿ ಮುದ್ದಣ ಪುರಸ್ಕಾರ 2003
ಕೂಡ್ಲು ಸುಬ್ರಾಯ ಶ್ಯಾನುಭೋಗ ಪ್ರಶಸ್ತಿ 2003
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ 2003
ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ 1988

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com