
ಮಂಗಳೂರು: ಪತ್ರಕರ್ತನ ಸೋಗಿನಲ್ಲಿ ಮರಳು ಸಂಗ್ರಹಕಾರರು ಮತ್ತು ಸಾಗಣೆದಾರರಿಂದ ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಬಳಿ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಕೊಕ್ಕಡ ಸಮೀಪ ಪಟ್ರಮೆಯ ಸತೀಶ್ ಎಂಬಾತ ಬಂಧಿತನಾಗಿದ್ದು ಈತ ಈ ಹಿಂದೆ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದ. ಆತನ ವಿರುದ್ಧ ಎರಡು ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಿದ ಪ್ರಕರಣಗಳು ಇವೆ ಎಂದು ಪೊಲೀಸರು ಹೇಳಿದ್ದಾರೆ. ಐಪಿಸಿ ಸೆಕ್ಷನ್ 384ರಡಿ ಕೇಸು ದಾಖಲಿಸಿ ಆತನನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿಜು ಎನ್ನುವ ವ್ಯಕ್ತಿ ಕಟ್ಟಡ ನಿರ್ಮಾಣಕ್ಕೆಂದು ತಮ್ಮ ಮನೆ ಸಮೀಪ ಮರಳು ತಂದು ಸಂಗ್ರಹಿಸಿಟ್ಟುಕೊಂಡಿದ್ದರು. ಅವರ ಬಳಿ ಹೋಗಿ ಬೆದರಿಕೆ ಹಾಕಿದ ಸತೀಶ್ ನಿಮ್ಮ ವಿರುದ್ಧ ಬರೆಯುತ್ತೇನೆ ಎಂದು ಬೆದರಿಕೆ ಹಾಕಿ 2 ಸಾವಿರ ರೂಪಾಯಿ ಕಿತ್ತುಕೊಂಡಿದ್ದ. ಬಿಜು ಅವರಿಗೆ ಸಂಶಯ ಬಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದರು. ಕೊನೆಗೆ ಪೊಲೀಸರು ಮೊನ್ನೆ ಬುಧವಾರ ಸಂಜೆ ಸತೀಶ್ ನನ್ನು ಬಂಧಿಸಿದ್ದಾರೆ.
ಟಿ ವಿ ಚಾನೆಲ್ ವೊಂದರ ಗುರುತು ಪತ್ರವನ್ನು ಸತೀಶ್ ತೋರಿಸುತ್ತಿದ್ದ, ಆದರೆ ಆ ಚಾನೆಲ್ ನ ಕಚೇರಿಗೆ ಫೋನ್ ಮಾಡಿ ಕೇಳಿದರೆ ಅಲ್ಲಿ ಆತ ಕೆಲಸಕ್ಕಿಲ್ಲ ಎಂಬ ಉತ್ತರ ಬಂತು. ಹಣ ಮಾಡುವ ಉದ್ದೇಶದಿಂದ ಸತೀಶ್ ಈ ತಂತ್ರ ಹೂಡಿದ್ದ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅವಿನಾಶ್ ತಿಳಿಸಿದ್ದಾರೆ.
ತನ್ನ ಗ್ರಾಮದಲ್ಲಿ ಯಾರಾದರೂ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟಿದ್ದಾರೆ ಎಂದು ಗೊತ್ತಾದ ಕೂಡಲೇ ಅವರ ಬಳಿ ಹೋಗಿ ಈ ರೀತಿ ಸತೀಶ್ ಬೆದರಿಕೆ ಹಾಕುತ್ತಿದ್ದ ಎಂದು ಕೆಲವರು ಹೇಳುತ್ತಾರೆ.
Advertisement