ಪೊಲೀಸ್ ಎಸ್ಕಾರ್ಟ್‌ನಲ್ಲಿಯೇ ತ್ರಿಬಲ್‌ ರೈಡ್ ಮಾಡಿದ ಸಚಿವ ಜಮೀರ್ ಅಹಮದ್ ವಿರುದ್ದ ದೂರು

ಪೊಲೀಸ್ ಎಸ್ಕಾರ್ಟ್‌ನಲ್ಲಿಯೇ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ವಕ್ಫ್ ಹಾಗೂ ಆಹಾರ ಮತ್ತು ನಾಗರಿಕ....
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್
ತುಮಕೂರು: ಪೊಲೀಸ್ ಎಸ್ಕಾರ್ಟ್‌ನಲ್ಲಿಯೇ ಹೆಲ್ಮೆಟ್ ಇಲ್ಲದೆ ತ್ರಿಬಲ್ ರೈಡ್ ಮಾಡಿದ ವಕ್ಫ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್‌ ಅಹಮದ್‌ ಖಾನ್ ವಿರುದ್ಧ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಧನಗೆರೆ ಗ್ರಾಮದ ಸಂಬಂಧಿಕರೊಬ್ಬರ ಮಗಳ ಮದುವೆಗೆ ಪಟ್ಟಣದ ದಿವ್ಯಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಸಚಿವ ಜಮೀರ್‌ ಆಹಮದ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಬೆಂಬಲಿಗರು ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು. ನಂತರ ಬೆಂಬಲಿಗರ ಬುಲೆಟ್‌ ವಾಹನದಲ್ಲಿ ಇನ್ನಿಬ್ಬರನ್ನು ಹಿಂಬದಿ ಕೂರಿಸಿಕೊಂಡು ಪಟ್ಟಣದ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಮೂಲಕ ಬೆಂಬಲಿಗರ ಜೈಕಾರದೊಂದಿಗೆ ಆಗಮಿಸುತ್ತಿದ್ದಾಗ, ಗ್ರಾಮ ದೇವತೆ ಸರ್ಕಲ್‌ನಲ್ಲಿ ಶಾಸಕ ಡಾ.ರಂಗನಾಥ್‌ ಜೊತೆಗೂಡಿದರು. ಹಿಂಬದಿಯ ಬೆಂಬಲಿಗರೊಬ್ಬರನ್ನು ಕೆಳಗಿಳಿಸಿದ ಸಚಿವರು, ಶಾಸಕ ಡಾ.ರಂಗನಾಥ್‌ ಜತೆಗೆ ಮತ್ತೊಬ್ಬ ಬೆಂಬಲಿಗರನ್ನು ಕೂರಿಸಿಕೊಂಡು ತ್ರಿಬಲ್‌ ರೈಡಿಂಗ್‌ ಮಾಡಿಕೊಂಡು ಕಲ್ಯಾಣ ಮಂಟಪಕ್ಕೆ ಆಗಮಿಸಿದರು.
ಸಾಮಾನ್ಯ ಜನ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಮಾಡಿದರೆ ಇದೇ ಪೊಲೀಸರು ದಂಡ ಕಟ್ಟಿಸುತ್ತಾರೆ, ಇಲ್ಲವೇ ಕೇಸು ದಾಖಲಿಸುತ್ತಾರೆ. ಆದರೆ ಸಚಿವ ಮತ್ತು ಶಾಸಕರ ತ್ರಿಬಲ್‌ ರೈಡಿಂಗ್‌ಗೆ ಎಸ್ಕಾರ್ಟ್‌ ಕೊಟ್ಟಿದ್ದಾರೆ ಎಂದು ಜನ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದಲಿಂಗೇಗೌಡ ಅವರು ಕುಣಿಗಲ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಶಾಸಕಾಂಗ ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ ಖಂಡ್ರೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com