ಮಂಡ್ಯ: ತನ್ನ ತಾಯಿಯನ್ನು ಕೆಟ್ಟದಾಗಿ ನೋಡಿ, ಸನ್ನೆ ಮಾಡಿ ಕರೆದ ಎಂಬ ಕಾರಣಕ್ಕೆ ಮಗ ಆ ವ್ಯಕ್ತಿಯ ತಲೆ ಕಡಿದು, ಅದನ್ನು ಪೊಲೀಸ್ ಠಾಣೆಗೆ ತಂದು ಶರಾಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಿಕ್ಕೆಬಾಗಿಲು ಗ್ರಾಮದ ಪಶುಪತಿ(28) ಎಂಬಾತ, ಅದೇ ಗ್ರಾಮದ ಗಿರೀಶ್(38) ಎಂಬಾತನ ತಲೆ ಕಡಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ತನ್ನ ತಾಯಿಯನ್ನು ಕೆಟ್ಟದ್ದಾಗಿ ಸನ್ನೆ ಮಾಡಿದ. ಹಾಗಾಗಿ ನನಗೆ ಮೂರು ದಿನ ನಿದ್ದೆ ಕೂಡ ಬಂದಿರಲಿಲ್ಲ. ಇಂತವನನ್ನು ಬಿಟ್ಟರೆ ನಾನು ಬದುಕಿದ್ದು ಸತ್ತಂತೆ. ಹೀಗಾಗಿ ಆತನ ಹತ್ಯೆ ಮಾಡಿದೆ ಎಂದು ಪಶುಪತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಆರೋಪಿಯನ್ನು ಬಂಧಿಸಿದ ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು, ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಬಂದಿದ್ದ. ಈ ಎರಡು ಘಟನೆ ಮಾಸುವ ಮುನ್ನವೇ ಬೆಚ್ಚಿ ಬೀಳಿಸುವ ಮತ್ತೊಂದು ಭೀಕರ ಕೃತ್ಯ ನಡೆದಿದೆ.