ಶಬರಿಮಲೆ ತೀರ್ಪು: ಮಹಿಳಾ ಕಾರ್ಯಕರ್ತರಲ್ಲಿ ಸಂತಸ, ಭಕ್ತರಲ್ಲಿ ಅಸಮಾಧಾನ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಕೂಡ ಪ್ರವೇಶಿಸಬಹುದು ...
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ
Updated on

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಕೂಡ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಮಹಿಳಾ ಕಾರ್ಯಕರ್ತರು ವ್ಯತಿರಿಕ್ತ ಪ್ರತಿಕ್ರಿಯೆ ನೀಡಿದ್ದಾರೆ.

ಅನೇಕ ವರ್ಷಗಳಿಂದ ಸಮಾಜದಲ್ಲಿ ಚಾಲ್ತಿಯಲ್ಲಿರುವ ಪದ್ದತಿಯನ್ನು ಬದಲಾಯಿಸಿ ನ್ಯಾಯಾಲಯ ತೀರ್ಪು ನೀಡಿದಾಗ ಅದರ ಬಗ್ಗೆ ವ್ಯಾಪಕ ಚರ್ಚೆ ಪರ ವಿರೋಧ ನಡೆಯುತ್ತದೆ. ಕೆಲವು ಮಹಿಳಾ ಕಾರ್ಯಕರ್ತರು ಇದನ್ನು ಒಪ್ಪಿದರೂ ಕೂಡ ಅಯ್ಯಪ್ಪನ ಭಕ್ತರು ಮಾತ್ರ ದೀರ್ಘಕಾಲೀನ ಸಂಪ್ರದಾಯಗಳು ಮತ್ತು ನಂಬಿಕೆಗಳ ಮೇಲೆ ಉಲ್ಲಂಘನೆಯಾಗಿದೆ ಎನ್ನುತ್ತಾರೆ.

ಜನವಾದಿ ಮಹಿಳಾ ಸಂಘಟನೆಯ ಕೆ ಎಸ ವಿಮಲಾ ಪ್ರತಿಕ್ರಿಯೆ ನೀಡಿ, ಸಂವಿಧಾನದಲ್ಲಿ ಹೆಣ್ಣು ಮತ್ತು ಗಂಡು ನಡುವಿನ ಸಮಾನತೆಯನ್ನು ಈ ತೀರ್ಪು ಮತ್ತೆ ಒತ್ತಿ ಹೇಳುತ್ತದೆ. ಧರ್ಮವನ್ನು ಪ್ರೀತಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಅಲ್ಲಿ ಲಿಂಗ, ಜಾತಿ ಮತ್ತು ಧರ್ಮದ ತಾರತಮ್ಯವಿರಬಾರದು ಎನ್ನುತ್ತಾರೆ. ಪ್ರತಿ ಧರ್ಮದಲ್ಲಿ ಕೂಡ ಮಹಿಳೆಯರಿಗೆ ಹಲವು ನಿರ್ಬಂಧ ಹೇರಲಾಗುತ್ತಿದೆ. ಅಂತಹ ಸಂಪ್ರದಾಯ ಮತ್ತು ನಿರ್ಧಾರಗಳನ್ನು ತೆಗೆದುಹಾಕಲು ನೋಡಿದರೆ ಅದು ಸಂಸ್ಕೃತಿ, ಪರಂಪರೆ ಮೇಲೆ ನಡೆಯುವ ದಾಳಿ ಎಂದು ಬಿಂಬಿಸಲಾಗುತ್ತಿದೆ ಎಂದು ವಿಮಲಾ ಹೇಳಿದರು.

ವಿಮರ್ಶಕಿ ಆಶಾ ದೇವಿ ಈ ಬಗ್ಗೆ ಪ್ರತಿಕ್ರಿಯಿಸಿ ಶಬರಿಮಲೆ ಪ್ರವೇಶಿಸುವುದಕ್ಕಿಂತ ಮಹಿಳೆಯರ ಸಮಸ್ಯೆ ದೊಡ್ಡದು. ಇಲ್ಲಿ ಜನರ ಭಾವನೆಗಳು ಬದಲಾಗಬೇಕು. ಜನರ ಭಾವನೆಗಳನ್ನು ಕಾನೂನಿನಿಂದ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸುಪ್ರೀಂ ಕೋರ್ಟ್ ತೀರ್ಪು ಸರಿಯಾಗಿದೆ ಎಂದರು. ಮುಟ್ಟಾದ ಮಹಿಳೆಯರು ಪ್ರವೇಶಿಸಬಾರದು ಎಂಬ ಬಗ್ಗೆ ಕೇಳಿದಾಗ ಯಾವ ವ್ಯಕ್ತಿ ಕೂಡ ಋತುಮತಿಯಾಗದ ಮಹಿಳೆಯಿಂದ ಹುಟ್ಟಲು ಸಾಧ್ಯವಿಲ್ಲ. ಅವರನ್ನು ಅಶುದ್ಧರು ಎಂದು ಕರೆಯುವುದು ನೋಡಿದಾಗ ಆಘಾತವಾಗುತ್ತದೆ ಎಂದರು.

ಭಕ್ತರ ನಿಲುವು ಬೇರೆ:
ಪ್ರತಿವರ್ಷ ಶಬರಿಮಲೆಗೆ ಹೋಗುವ ನಟ ಶ್ರೀನಗರ ಕಿಟ್ಟಿ, ಸಮಾಜದಲ್ಲಿರುವ ಸಂಪ್ರದಾಯ ಮತ್ತು ಮೌಲ್ಯಗಳಿಗೆ ಇಂತಹ ತೀರ್ಪು ವಿರುದ್ಧವಾಗಿರುತ್ತದೆ. ಈ ಬಗ್ಗೆ ಪರ ವಿರೋಧ ಕೇಳಿಬರುತ್ತಲೇ ಇರುತ್ತದೆ. ಆದರೆ ಅಲ್ಲಿನ ಕಟ್ಟಾ ಭಕ್ತರಿಗೆ ಇದು ಖಂಡಿತಾ ಬೇಸರ ತರುತ್ತದೆ, ಇಲ್ಲಿ ಮಹಿಳೆಯರ ನಿರ್ಧಾರಕ್ಕೇ ಬಿಡಬೇಕಾಗುತ್ತದೆ ಎನ್ನುತ್ತಾರೆ.

ಅಯ್ಯಪ್ಪ ಭಜನ ಸಂಘದ ಗೌರವ ಕಾರ್ಯದರ್ಶಿ ಟಿ ಪಿ ರಾಧಾಕೃಷ್ಣ, ದೇವಸ್ಥಾನದ ಪಾವಿತ್ರ್ಯತೆಗೆ ಮಹಿಳೆಯರ ಪ್ರವೇಶದಿಂದ ಧಕ್ಕೆಯುಂಟಾಗುತ್ತದೆ. ಇಲ್ಲಿಯವರೆಗಿರುವ ಸಂಪ್ರದಾಯಗಳನ್ನು ಹಿಂದೂಗಳು ಪಾಲಿಸುತ್ತಿದ್ದರು. ಕೆಲವೊಂದು ಸಂಪ್ರದಾಯಗಳಿಗೆ ನಾವು ಮಧ್ಯ ಪ್ರವೇಶಿಸಬಾರದು ಎಂದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಟಿ ಬಿ ಶೇಖರ್, ಸುಪ್ರೀಂ ಕೋರ್ಟ್ ನ ತೀರ್ಪು ಆಘಾತ ತಂದಿದೆ. ಇದರಿಂದ ಸಂಪ್ರದಾಯಕ್ಕೆ ಧಕ್ಕೆಯುಂಟಾಗಲಿದೆ. ದೇಶದ ಸಂವಿಧಾನದ ಮೇಲೆ ಗೌರವವಿರುವುದರಿಂದ ತೀರ್ಪನ್ನು ನಾವು ವಿರೋಧಿಸುವುದಿಲ್ಲ. ರಸ್ತೆಗಳಿದು ಪ್ರತಿಭಟನೆ ಕೂಡ ಮಾಡುವುದಿಲ್ಲ. ಅದರ ಬದಲು ನಾವು ದೇಶಾದ್ಯಂತ ಇರುವ ಎಲ್ಲಾ ಅಯ್ಯಪ್ಪ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com