ದೇಶದಲ್ಲೇ ಪ್ರಥಮ! ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ

ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೊಳ್ಳಲಿರುವ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೊಳ್ಳಲಿರುವ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಇದರಿಂದಾಗಿ ಕರ್ನಾಟಕದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ ಇನ್ನು ಮುಂದೆ ಕಾನೂನಿನ ರಕ್ಷಣೆ ದೊರೆಯಲಿದೆ. ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲಿದೆ. 2016 ರಲ್ಲಿ 1,50,785 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕರ್ನಾಟಕ ಜೀವ ರಕ್ಷಕರು ಹಾಗೂ ವೈದ್ಯಕೀಯ ವೃತ್ತಿಪರರಿಗೆ (ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ 2016ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಸೂದೆಯಿಂದ ಯಾವುದೇ ಅಪಘಾತಕ್ಕೀಡಾದ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸುವವರಿಗಾಗಲಿ, ಚಿಕಿತ್ಸೆ ನೀಡುವವರಿಗಾಗಲಿ ಪೋಲೀಸ್ ತನಿಖೆಯ ಭಯವಿರುವುದಿಲ್ಲ.
ವೈದ್ಯಕೀಯ ನಿಘಂಟಿನಲ್ಲಿ "ಗೋಲ್ಡನ್ ಅವರ್" ಎಂದರೆ ಅಪಘಾತವಾದ ಕೆಲವೇ ನಿಮಿಷಗಳಲ್ಲಿ ತುರ್ತು ಚಿಕಿತ್ಸೆ ನೀಡಬೇಕಾಗಿರುವ ಅವಧಿಯಾಗಿದೆ. ಈ ಹೊಸ ಮಸೂದೆ ಜಾರಿಯಿಂದ "ಗೋಲ್ಡನ್ ಅವರ್" ನಲ್ಲಿ ಯಾವುದೇ ಜೀವರಕ್ಷಕರು, ವೈದ್ಯರು ಪೋಲೀಸರ ಕಿರುಕುಳ, ತನಿಖೆಯ ಭಯವಿಲ್ಲದೆ ತುರ್ತು ಚಿಕಿತ್ಸೆ ನೀಡಬಹುದು.
ಹೊಸ ಕಾನೂನಿನಡಿಯಲ್ಲಿ ಕರ್ನಾಟಕ ಸರ್ಕಾರ ಜೀವ ರಕ್ಷಕರಿಗೆ ಹಣದ ನೆರವನ್ನು ಒದಗಿಸಲಿದೆ.ಅಲ್ಲದೆ ನ್ಯಾಯಾಲಯ, ಪೋಲೀಸ್ ಠಾಣೆಗೆ ಅವರು ಹಾಜರಾಗುವುದರಿಂದ ವಿನಾಯಿತಿ ದಿರೆಯುತ್ತದೆ.ಇಷ್ಟಕ್ಕೂ ಅವರು ನ್ಯಾಯಾಲಯ ಅಥವಾ ಪೋಲೀಸ್ ಠಾಣೆಗೆ ಹಾಜರಾಗುವುದು ತೀರಾ ಅಗತ್ಯವಾಗಿದ್ದರೆ ಅಂತಹಾ ವೇಳೆ ಅವರ ಪ್ರಯಾಣ ಹಾಗೂ ಇತರೆ ವೆಚ್ಚಗಳನ್ನು ಜೀವ ರಕ್ಷಕರ ನಿಧಿಯ ಮೂಲಕ ಭರಿಸಲಾಗುವುದು.
ಅಪಘಾತಕ್ಕೀಡಾದವರನ್ನು ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ಬಳಿಕ ಜೀವರಕ್ಕ್ಷಕರು ನಿರುಮ್ಮಳವಾಗಿ ಹಿಂತುರಗಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.ಹೊಸ ಕಾನೂನಿನಂತೆ ಜೀವ ರಕ್ಷಕರಿಗೆ ಪೋಲೀಸರು, ಕಾನೂನಿನ ಹೆಸರಲ್ಲಿ ಯಾವ ಕಿರುಕುಳ ನೀಡುವಂತಿಲ್ಲ ಎನ್ನುವ ಸ್ಪಷ್ಟ ಸಂದೇಶವಿದೆ ಎಂದು ಅಧಿಕೃತ ಮಾಹಿತಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com