ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರಿನ ಕಾಲೇಜುಗಳಲ್ಲಿ ಕಾಮರ್ಸ್ ಕೋರ್ಸ್ ಗೆ ಭಾರೀ ಡಿಮ್ಯಾಂಡ್: ಕಟ್ ಆಫ್ ಮಾರ್ಕ್ಸ್ ಶೇ.90!
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ನಗರದ ಹಲವು ಪದವಿ ಕಾಲೇಜುಗಳಲ್ಲಿ ...
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ ನಗರದ ಹಲವು ಪದವಿ ಕಾಲೇಜುಗಳಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ಬಿ.ಕಾಂ ಪದವಿ ಕೋರ್ಸ್ ಗಳ ಕಟ್ ಆಫ್ ಮಾರ್ಕ್ಸ್ ಈ ವರ್ಷ ಶೇಕಡಾ 90ಕ್ಕೇರಿದೆ. ಅಂದರೆ ಶೇಕಡಾ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದವರು ಮಾತ್ರ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಗಳಿಸಲು ಸಾಧ್ಯ.
ಕಳೆದ ವರ್ಷ ನಗರದ ಉನ್ನತ ಮಟ್ಟದ ಕಾಲೇಜುಗಳಲ್ಲಿ ಬಿ ಕಾಂ ಕೋರ್ಸ್ ಗೆ ಕಟ್ ಆಫ್ ಮಾರ್ಕ್ಸ್ ಶೇಕಡಾ 85ರಿಂದ 90ರಲ್ಲಿತ್ತು. ಆದರೆ ಈ ವರ್ಷ ಸಾಮಾನ್ಯ ಗುಣಮಟ್ಟದ ಕಾಲೇಜುಗಳಲ್ಲಿ ಸಹ ಕಟ್ ಆಫ್ ಮಾರ್ಕ್ಸ್ ಶೇಕಡಾ 85ರಷ್ಟಿದೆ. ಅದಕ್ಕಿಂತ ಕಡಿಮೆ ಶೇಕಡಾವಾರು ಅಂಕ ಗಳಿಸಿದವರಿಗೆ ಪ್ರವೇಶಾತಿ ಪಡೆಯಲು ಕಷ್ಟವಾಗುತ್ತದೆ.
ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಕೆ ಮತ್ತು ಬಿ ಕಾಂ ಕೋರ್ಸ್ ಗೆ ಬೇಡಿಕೆಯನ್ನು ಕಟ್ ಆಫ್ ಮಾರ್ಕ್ಸ್ ನಲ್ಲಿನ ಶೇಕಡಾವಾರು ಹೆಚ್ಚಳ ತೋರಿಸುತ್ತದೆ. ನಾನು ಪಿಯುಸಿಯಲ್ಲಿ ಶೇಕಡಾ 79 ಗಳಿಸಿದ್ದು ನಗರದ ಟಾಪ್ ಕಾಲೇಜಿಗೆ ಹೋಗಿ ಬಿ ಕಾಂ ಕೋರ್ಸ್ ಗೆ ಅರ್ಜಿ ಕೇಳಿದರೆ ಒಂದು ವಾರ ಬಿಟ್ಟು ಬನ್ನಿ ಎರಡನೇ ಸುತ್ತಿನಲ್ಲಿ ಶೇಕಡಾ 85ಕ್ಕಿಂತ ಕಡಿಮೆ ಅಂಕ ಗಳಿಸಿದವರಿಗೆ ಪ್ರವೇಶಾತಿ ನೀಡುತ್ತೇವೆ ಎಂದರು ಎಂದು ಒಬ್ಬ ವಿದ್ಯಾರ್ಥಿ ಹೇಳುತ್ತಾರೆ.
ಆದರೆ ಬಿ ಎಸ್ಸಿ ಕೋರ್ಸ್ ಗಳಿಗೆ ಈ ವರ್ಷ ಅಷ್ಟೊಂದು ಬೇಡಿಕೆಯಿಲ್ಲ. ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳಿಗೆ ಹೋಗುವುದರಿಂದ ಬಿ ಎಸ್ಸಿ ಕೋರ್ಸ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಬಿಸಿಎ ಕೋರ್ಸ್ ಗಳ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬಿ ಕಾಂ ಕೋರ್ಸ್ ನಷ್ಟು ಕಟ್ ಆಫ್ ಶೇಕಡಾವಾರು ಬಿಸಿಎ ಕೋರ್ಸ್ ಗೆ ಇಲ್ಲ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳುತ್ತಾರೆ.
ಬಿಎಸ್ಸಿ ಕೋರ್ಸ್ ಗೆ ಅರ್ಜಿ ಸಲ್ಲಿಸಿದವರು ಸಿಇಟಿ ಮತ್ತು ನೀಟ್ ಪರೀಕ್ಷೆ ಫಲಿತಾಂಶ ಹೊರಬಿದ್ದ ನಂತರ ಕೆಲವರು ವೃತ್ತಿಪರ ಕೋರ್ಸ್ ಗಳಿಗೆ ಸೇರುತ್ತಾರೆ. ಕೆಲವು ಕಾಲೇಜುಗಳಲ್ಲಿ ಬಿಬಿಎಂ ಮತ್ತು ಬಿಬಿಎ ಕೋರ್ಸ್ ಗಳಿಗೆ ವಾಕ್ ಇನ್ ಪ್ರವೇಶ ಸಂದರ್ಶನವಿರುತ್ತದೆ ಎಂದು ಮತ್ತೊಂದು ಕಾಲೇಜಿನ ಪ್ರಾಂಶುಪಾಲರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ