ಚಿತ್ರದುರ್ಗ: ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಸೋಮವಾರ ನಸುಕಿನ ಜಾವ ಚಿತ್ರದುರ್ಗ ನಗರದ ಜಿಎಂಟಿ ವೃತ್ತದ ಸಮೀಪ ನಡೆದ ಅಪಘಾತದಲ್ಲಿ ಬೆಂಗಳೂರಿನವರಾದ ಕಾರ್ತಿಕ್ ಗೌಡ(20), ಹರ್ಷ(20), ಶ್ರೀನಿಧಿ(20) ಎಂಬುವವರು ಸಾವನ್ನಪ್ಪಿದ್ದಾರೆ.
ಬೆಂಗಳೂರು ವಿಜಯಾ ಕಾಲೇಜಿನನಲ್ಲಿ ಕಾಮರ್ಸ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ 13 ವಿದ್ಯಾರ್ಥಿಗಳು ಶುಕ್ರವಾರ ಗೋಕರ್ಣಕ್ಕೆ ಪ್ರವಾಸಕ್ಕೆಂದು ತೆರಳಿದ್ದಾರೆ. ಪ್ರವಾಸ ಮುಗಿಸಿ ವಾಪಾಸಾಗುವ ವೇಳೆ ಟಯರ್ ಬ್ಲಾಸ್ಟ್ ಆಗಿದ್ದ ಕಾರಣ ಟೀಟಿ ವಾಹನ ಕೆಟ್ಟು ನಿಂತಿತ್ತು. ಆ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿಯಾಗಿ ಟಿಟಿ ವಾಹನ ಸಮೀಪದಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.