ಮೈಸೂರು: ದಸರಾ ಆನೆ ಜ್ಯೂನಿಯರ್ ದ್ರೋಣ ಇನ್ನಿಲ್ಲ

ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಯ ಪಕ್ಕ ಗಾಂಬೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಜ್ಯೂನಿಯರ್ ದ್ರೋಣ ಇನ್ನಿಲ್ಲ.. "ದ್ರೋಣ" ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ದ್ರೋಣ
ದ್ರೋಣ
ಮೈಸೂರು: ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಯ ಪಕ್ಕ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಜ್ಯೂನಿಯರ್ ದ್ರೋಣ ಇನ್ನಿಲ್ಲ.. "ದ್ರೋಣ" ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆದರೆ ಅರಣ್ಯ ಇಲಾಖೆ ತನ್ನ ಸಾವಿನ ಕಾರಣವನ್ನು ದೃಢೀಕರಿಸಲಿಲ್ಲ. 37 ವರ್ಷದ ದ್ರೋಣ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಮತ್ತಿಗೋಡು ಆನೆ ಶಿಬಿರದ ತಿಥಿಮತಿಯಲ್ಲಿ ಬಾಯಾರಿಕೆಯಾಗಿ ನೀರು ಕುಡಿದ ಬಳಿಕ ಅಲ್ಲಿಯೇ ಕುಸಿದು ಸಾವನ್ನಪ್ಪಿದೆ.
ನೀರು ಕುಡಿದಾದ ನಂತರ ಆನೆ ಕುಸಿದು ಬೀಳುವುದನ್ನು ಕಂಡ ಅರಣ್ಯ ಸಿಬ್ಬಂದಿ ಅದರತ್ತ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಆನೆ ಸಾವನ್ನಪ್ಪಿದೆ. ಸಾಮಾನ್ಯವಾಗಿ ಶಿಬಿರದಲ್ಲಿನ ಆನೆಗಳ ಸರಾಸರಿ ಆಯಸ್ಸು 60  ವರ್ಷಗಳಾಗಿರಲಿದೆ.
ಹಾಸನ ಜಿಲ್ಲೆಯ ಅಲೂರು ಕಾಡಿನಿಂದ  2014 ರಲ್ಲಿ ಸೆರೆಹಿಡಿಯಲ್ಪಟ್ಟಿದ್ದ ದ್ರೋಣನನ್ನು ಮತ್ತಿಗೋಡು ಶಿಬಿರದಲ್ಲಿ ಪಳಗಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಈ ಆನೆ ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿತ್ತು.
"ಆನೆ ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ" ಎಂದು ನಾಗರಾಹೊಳೆ ಆನೆ ಶಿಬಿರದ ಪಶುವೈದ್ಯ  ಡಾ.ಮುಝೀಬ್ ಹೇಳಿದರು. ನಾಗರಾಹೊಳೆ ಅಭಯಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ, ನಾರಾಯಣಸ್ವಾಮಿ, ಆನೆ ಶುಕ್ರವಾರ ಬೆಳಿಗ್ಗೆ ನಿಧನವಾಗಿದ್ದಾಗಿ ಖಚಿತಪಡಿಸಿದ್ದಾರೆ.
ವಿಶೇಷವೆಂದರೆ ಈ ಹಿಂದೆ ದಸರಾ ಆನೆಗಳ ಪಾಳಯದಲ್ಲಿ ದ್ರೋಣ ಎಂಬ ಆನೆ 18 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ದಾಖಲೆ ಮಾಡಿತ್ತು. ಆ ಹಿರಿಯ ದ್ರೋಣ 1998ರಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದು ಆ ನಂತರ ಚಿಕ್ಕ ಆನೆಯೊಂದಕ್ಕೆ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು.
ದಸರಾ ಆನೆ ಸಾವಿಗೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಜಿಟಿ ದೇವೇಗೌಡ ಸೇರಿ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com