ಮತ್ತೆ ಪ್ರಾಥಮಿಕ ಶಾಲೆಗಳಿಗೆ ಬರಲಿದೆ ಪಬ್ಲಿಕ್ ಪರೀಕ್ಷೆ

ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶಗಳು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶಗಳು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಪ್ರಾಥಮಿಕ ಹಂತದಲ್ಲೇ ಒಂದು ಇಲ್ಲವೇ ಎರಡು ಹಂತಗಳಲ್ಲಿ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಹೊಸ ನಿಯಮ ಅಳವಡಿಕೆ ಕುರಿತು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಒಂದರಿಂದ ಹತ್ತನೇ ತರಗತಿಯವರೆಗೆ ಯಾವುದೇ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮದಿಂದ ಎಸ್ಎಸ್ಎಲ್ ಸಿ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ನಿಯಮದಿಂದ ಶಿಕ್ಷಕರು ಹಾಗೂ ಮಕ್ಕಳು ತಮ್ಮ ಪಾಠ ಪ್ರವಚನ ಹಾಗೂ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹತ್ತನೇ ತರಗತಿಯಲ್ಲಿ ಮಕ್ಕಳು ಏಕಾಏಕಿ ಪಬ್ಲಿಕ್ ಪರೀಕ್ಷೆ ಎದುರಿಸುವುದರಿಂದ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದಾರೆ ಎಂದರು. 
ಆದ್ದರಿಂದ ಕೇಂದ್ರ ಸರ್ಕಾರದ ನಿಯಮದಂತೆ ಐದು ಹಾಗೂ ಎಂಟನೇ ತರಗತಿಯಲ್ಲಿ ಎರಡು ಹಂತಗಳ ಇಲ್ಲವೇ 8ನೇ ತರಗತಿಯಲ್ಲಿ ಒಂದು ಹಂತದ ಪಬ್ಲಿಕ್‍ ಪರೀಕ್ಷೆ ನಡೆಸಲು ಆಲೋಚಿಸಲಾಗುತ್ತಿದೆ. ಒಂದೇ ಹಂತದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸುವುದಾದರೆ ಐದನೇ ತರಗತಿಯಲ್ಲಿ ಮಕ್ಕಳ ಸಾಧನೆ ಆಧಾರದ ಮೇಲೆ ಅವರನ್ನು ಅನುತ್ತೀರ್ಣಗೊಳಿಸುವ ಹಕ್ಕನ್ನು ಶಿಕ್ಷಕರಿಗೆ ನೀಡುವ ಕುರಿತು ಕೂಡ ಚರ್ಚೆ ನಡೆಯುತ್ತಿದೆ ಎಂದರು. 
ಈ ನಿಯಮದ ಅಳವಡಿಕೆ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿರುವುದರಿಂದ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಈ ನಿಯಮ ಜಾರಿಯಾಗುವ ಸಾಧ್ಯತೆಯಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com