ಕಿಸಾನ್ ಸಮ್ಮಾನ್ ಯೋಜನೆಗಾಗಿ ಸಾದಿಲ್ವಾರು ನಿಧಿ ಅಧಿನಿಯಮಕ್ಕೆ ತಿದ್ದುಪಡಿ: ಸುಗ್ರೀವಾಜ್ಞೆಗಾಗಿ ರಾಜ್ಯಪಾಲರಿಗೆ ರವಾನೆ

ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಲು ತುರ್ತು ನಿರ್ವಹಣೆಗಾಗಿ ಬಳಸುವ 'ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1957'ಕ್ಕೆ ತಿದ್ದುಪಡಿ ತಂದು ಆಧ್ಯಾದೇಶದ ಹೊರಡಿಸುವ....
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು:  ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಲು ತುರ್ತು ನಿರ್ವಹಣೆಗಾಗಿ ಬಳಸುವ 'ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1957'ಕ್ಕೆ ತಿದ್ದುಪಡಿ ತಂದು ಆಧ್ಯಾದೇಶದ ಹೊರಡಿಸುವ ಮೂಲಕ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ,
ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಆಪತ್ಕಾಲೀನ ನಿಧಿ ಬಳಸಿಕೊಂಡು ತಮ್ಮ ಸರ್ಕಾರದ ಭರವಸೆ ಈಡೇರಿಸಿಕೊಂಡ ಕೆಟ್ಟ ಸಂಪ್ರದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ ಹಾಡಿದ್ದಾರೆ.
ರಾಜ್ಯದ ತುರ್ತು ಕಾರ್ಯಕ್ರಮಗಳ ನಿರ್ವಹಣಾ ನಿಧಿ (contingency fund))ಯ ಮೊತ್ತವನ್ನು 80 ಕೋಟಿ ರೂ ನಿಂದ ತಾತ್ಕಾಲಿಕವಾಗಿ 2200 ಕೋಟಿ ರೂ ಗಳಿಗೆ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತಿನ 2000 ರೂ. ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸತತ ಬರಗಾಲದಿಂದ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು , ಬಿತ್ತಿದ ಬೆಳೆ ಸರಿಯಾಗಿ ಇಳುವರಿ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಬೆಳೆದ ಬೆಳೆಗೂ ಸರಿಯಾದ ದರ ಸಿಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಗೆ ಆರ್ಥಿಕ ನೆರವು ನೀಡಲು ಈ ತೀರ್ಮಾನ ಕೈಗೊಳ್ಳಲಾಗಿದೆ. ನೂತನ ಯೋಜನೆಗೆ ಆಯವ್ಯಯದಲ್ಲಿ ಅವಕಾಶ ಮಾಡಿಕೊಂಡಿಲ್ಲ. ಹೀಗಾಗಿ ಹೊಸ ಲೆಕ್ಕಶೀರ್ಷಿಕೆ ಸೃಜಿಸಿ ಸದನದ ಅನುಮೋದನೆ ಪಡೆದು ಹಣ ಬಿಡುಗಡೆಗೆ ಮಾಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಸಾದಿಲ್ವಾರು ನಿಧಿಯನ್ನು ಪರಿಷ್ಕರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಅದರಂತೆ ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ)ನಿಯಮಗಳು,1977ರ ನಿಯಮ 14(2) ಅಡಿ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಅಧಿನಿಯಮದ ಮೊದಲನೆಯ ಅನುಸೂಚಿ ಸಂಖ್ಯೆ 1ರ ಅನ್ವಯ ಕರ್ನಾಟಕ ಸಾದಿಲ್ವಾರು ಅಧಿನಿಯಮ 1957ರ ಅನುಚ್ಛೇದ 2ರಲ್ಲಿ ನಿಧಿಯನ್ನು 80 ಕೋಟಿ ರೂ ಗಳಿಂದ 2200 ಕೋಟಿ ರೂ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡದಿದ್ದರೂ ಸಚಿವ ಸಂಪುಟ ಸಭೆಯಲ್ಲಿಟ್ಟು ಅನುಮೋದನೆ ಪಡೆದು ಸುಗ್ರೀವಾಜ್ಞೆ ಮೂಲಕ ಯೋಜನೆ ಜಾರಿಗೊಳಿಸಲು ಕಾಯ್ದೆಯ ಕಡತವನ್ನು ರಾಜಭವನಕ್ಕೆ ರವಾನಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಪದಗ್ರಹಣ ಮಾಡಿದ ಬಳಿಕ ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರವೂ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದರು. ಈಗಾಗಲೇ ಹಿಂದಿನ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರ ಸಾಲಮನ್ನಾ ಹೆಸರಿನಲ್ಲಿ ರಾಜ್ಯದ ಮೇಲೆ ಆರ್ಥಿಕ ಹೊರೆ ಹೇರಿದ್ದು, ಸಾಲಮನ್ನಾ ಯೋಜನೆಗೆ ಅನುದಾನ ಹೊಂದಿಸಲು ಆರ್ಥಿಕ ಇಲಾಖೆ ಹರಸಾಹಸಪಟ್ಟಿದೆ. ಈ ನಡುವೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ನೆರವು ಘೋಷಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಅಧೋಗತಿಗೆ ದೂಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ರೈತರ ಖಾತೆಗೆ 4,000 ರೂ ಜಮೆ ಮಾಡಲು ಅನುದಾನ ಹೊಂದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಹಿಂದಿನ ಸರ್ಕಾರಗಳ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಆದರೆ ಏಕಾಏಕಿ ಅನುದಾನವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಕರ್ನಾಟಕ ಸಾದಿಲ್ವಾರು ನಿಧಿ 1957ಗೆ ಕೈ ಹಾಕಿದ್ದಾರೆ. ಹಿಂದಿನ ಮೈಸೂರು ಸರ್ಕಾರ 30 ಲಕ್ಷ ರೂಗಳ ಕರ್ನಾಟಕ ಆಪತ್ಕಾಲಿನ ನಿಧಿಯನ್ನು ಸ್ಥಾಪಿಸಿತ್ತು. ನಂತರದ ವರ್ಷಗಳಲ್ಲಿ 20 ಕೋಟಿ, 100 ಕೋಟಿ ರೂಗಳಿಗೆ ನಿಧಿಯನ್ನು ಹೆಚ್ಚಳ ಮಾಡಲು 1976 ಹಾಗೂ 2003 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಈಗ ಮೂರನೇ ತಿದ್ದುಪಡಿ ಮೂಲಕ ಬಿಜೆಪಿ ಸರ್ಕಾರ ನಿಧಿಯನ್ನು 2,200 ಕೋಟಿ ರೂಗೆ ಹೆಚ್ಚಳ ಮಾಡಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 50 ಲಕ್ಷದ 98 ಸಾವಿರದ 732 ರೈತರು ನೋಂದಣಿ ಮಾಡಿದ್ದಾರೆ. ಎರಡು ಕಂತುಗಳಲ್ಲಿ 212.46 ಕೋಟಿ ರೂ ಹಣವನ್ನು ರೈತರ ಖಾತೆಗೆ ಕೇಂದ್ರ ಸರ್ಕಾರ ಜಮಾ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com