
ಬೆಂಗಳೂರು: ಕೃಷ್ಣಾ ಕಣಿವೆ ಪ್ರದೇಶದಲ್ಲಿ ಸುರಿದ ಭಾರೀ ಮಳೆ, ಘಟಪ್ರಭಾ, ಮಲಪ್ರಭಾ ನದಿಗೆ ಹೆಚ್ಚಿನ ನೀರು ಬಿಡುಗಡೆ, ಕರಾವಳಿ, ಮಲೆನಾಡು ಭಾಗದಲ್ಲಿ ಕಾಣಿಸಿಕೊಂಡ ನೆರೆಯಿಂದಾಗಿ ಜೀವ ಹಾನಿ, ಬೆಳೆ, ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳನ್ನು ನೆರೆಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ.
ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರ ನೇತೃತ್ವದ ಕಾರ್ಯಕಾರಿ ಸಮಿತಿ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದೆ.
ಮುಂಗಾರು ಋತುವಿನಲ್ಲಿ ಆಗಸ್ಟ್ 1 ರಿಂದ 9ರವರೆಗೆ ಸುರಿದ ಮಳೆ ಹಾಗೂ ಕೃಷ್ಣಾ, ಘಟಪ್ರಬಾ, ಮಲಪ್ರಭಾ ಕಣಿವೆ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದ ಹೆಚ್ಚಿನ ನೀರನ್ನು ನದಿಗಳಿಗೆ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ನಿರಂತರ ನೆರೆಯಿಂದ ಲಕ್ಷಾಂತರ ಜನ ಮನೆ, ಆಸ್ತಿ, ಬೆಳೆ ಕಳೆದುಕೊಂಡಿದ್ದಾರೆ. 30 ಕ್ಕೂ ಹೆಚ್ಚು ಜನರ ಜೀವ ಹಾನಿಯಾಗಿದೆ. ಸಾವಿರಾರು ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ಹಾಗೂ ಕೇಂದ್ರದ ವಿಪತ್ತು ನಿರ್ವಹಣಾ ಮಾರ್ಗ ಸೂಚಿಸಿಗಳ ಅನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಮಳೆ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಅಂದರೆ ಮುಂದಿನ ಆದೇಶದವರೆಗೆ ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿ ಪುರ್ನವಸತಿ ಕೇಂದ್ರ, ಆಹಾರ, ಆರೋಗ್ಯ ಹಾಗೂ ಮೂಲಸೌಕರ್ಯಗಳನ್ನು ನೀಡುವಂತೆಯೂ ಸೂಚನೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ ,ಖಾನಾಪುರ, ರಾಮದುರ್ಗ, ರಾಯಭಾಗ, ಸವದತ್ತಿ ಸೇರಿದಂತೆ 10 ತಾಲೂಕುಗಳು.
ಬಾಗಲಕೋಟೆ ಜಿಲ್ಲೆಯ ಬದಾಮಿ, ಬಾಗಲಕೋಟೆ, ಬೀಳಗಿ, ಹುನುಗುಂದ, ಜಮಖಂಡಿ, ಮುಧೋಳ ತಾಲೂಕು ಸೇರಿದಂತೆ 6 ತಾಲೂಕುಗಳು.
ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸಗೂರು, ರಾಯಚೂರು 3 ತಾಲೂಕುಗಳು.
ಕಲಬುರಗಿ ಜಲ್ಲೆಯ ಜೇವರ್ಗಿ, ಅಫಜಲ್ ಪುರ ತಾಲೂಕುಗಳು
ಯಾದಗಿರಿ ಜಿಲ್ಲೆಯ ಶಹಾಪುರ, ಶೋರಪುರ, ಯಾದಗಿರಿ ತಾಲೂಕುಗಳು
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂಧಗಿ ಸೇರಿ 4 ತಾಲೂಕುಗಳ.
ಗದಗ ಜಿಲ್ಲೆಯ ನರಗುಂದ, ರೋಣ, ಶಿರಹಟ್ಟಿ ಸೇರಿ ತಾಲೂಕು
ಹಾವೇರಿ ಜಿಲ್ಲೆಯ ಹಾನಗಲ್, ಹಾವೇರಿ, ಸವಣೂರು, ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಸೇರಿದಂತೆ 6 ತಾಲೂಕುಗಳು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ ಸೇರಿದಂತೆ 5 ತಾಲೂಕುಗಳುಯ
ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ ಸೇರಿದಂತೆ 6 ತಾಲೂಕುಗಳು
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು,ಆಲೂರು ತಾಲೂಕುಗಳು,
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಸೇರಿದಂತೆ ನಾಲ್ಕು ತಾಲೂಕುಗಳು.
ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರ ಪೇಟೆ, ವಿರಾಜಪೇಟೆ ಸೇರಿದಂತೆ 3 ತಾಲೂಕುಗಳು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ ಸೇರಿದಂತೆ 5 ತಾಲೂಕುಗಳು, ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಉಡುಪಿ ತಾಲೂಕುಗಳು, ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಭಟ್ಕಳ, ಹಳಿಯಾಳ, ಹೊನ್ನಾವರ, ಕಾರವಾರ, ಕುಮಟಾ, ಮುಂಡಗೋಡ, ಸಿದ್ದಾಪುರ, ಶಿರಸಿ, ಸೂಪ ಹಾಗೂ ಯಲ್ಲಾಪುರ ಸೇರಿದಂತೆ 11 ತಾಲೂಕುಗಳನ್ನು ಹಾಗೂ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ನಂಜನಗೂಡು, ಟಿ ನರಸೀಪುರ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
Advertisement