ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ 10 ಕೋಟಿ ರೂ. ಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರು: ಸಿಎಂ

ಪ್ರವಾಹ ಸಂತ್ರಸ್ತ ಗ್ರಾಮಗಳ ಪುನಶ್ಚೇತನಕ್ಕೆ ಹತ್ತು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಆಯಾ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Updated on

ಬೆಂಗಳೂರು: ಪ್ರವಾಹ ಸಂತ್ರಸ್ತ ಗ್ರಾಮಗಳ ಪುನಶ್ಚೇತನಕ್ಕೆ ಹತ್ತು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಆಯಾ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉದ್ದಿಮೆದಾರರನ್ನು ಆಹ್ವಾನಿಸಿ ಮುಖ್ಯಮಂತ್ರಿಗಳು, ನೆರೆ ಬಾಧಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು. ಸರ್ಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಭರವಸೆ ನೀಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. 23 ಜಿಲ್ಲೆಗಳ 103 ತಾಲೂಕುಗಳನ್ನು ಪ್ರವಾಹ ಸಮಸ್ಯಾತ್ಮಕ ಹಾಗೂ 56 ಸಾವಿರ ಮನೆಗಳು ವಾಸಕ್ಕೆ ಯೋಗ್ಯವಲ್ಲ ಎಂದೂ ಘೋಷಿಸಲಾಗಿದೆ.

ಸಂತ್ರಸ್ತರ ನೆರವಿಗೆ ಕೈಗಾರಿಕೋದ್ಯಮಿಗಳು ಉದಾರವಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದರು. 23 ಜಿಲ್ಲೆಗಳ 200 ಗ್ರಾಮಗಳ ಜನ, ಜಾನುವಾರುಗಳನ್ನು ಸ್ಥಳಾಂತರಿಸಬೇಕಾದ ಅಗತ್ಯವಿದ್ದು ಉದ್ದಿಮೆದಾರರು ಉದಾರ ದೇಣಿಗೆ ನೀಡುವಂತೆ ಯಡಿಯೂರಪ್ಪ ಕೋರಿದರು. 
ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಿದ ಸಂಸ್ಥೆ ಹೆಸರನ್ನೇ ಆ ಗ್ರಾಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಿದ್ದು, ಹಣ ನೀಡುವ ಸಂಸ್ಥೆ ಆ ಗ್ರಾಮವನ್ನು ದತ್ತು ಪಡೆದುಕೊಂಡಂತೆ ಎಂದು ಹೇಳಿದರು.‌

ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ತಗ್ಗಿದ್ದು ಸಂಪೂರ್ಣ ಚಿತ್ರಣ, ನಷ್ಟ ತಿಳಿಯಲು ಇನ್ನು ಕೆಲವು ದಿನ ಬೇಕಾಗಲಿದೆ ಎಂದರು. ಬಟ್ಟೆ, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ನೆರವಾಗಲು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಕೈಗಾರಿಕೋದ್ಯಮಿಗಳು ಬಯಸುವ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. 

ಸಂಸ್ಥೆ ಉದ್ಯಮ ನಡೆಸಲು ಬೇಕಾದ ಮೂಲಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸೂಚಿನೆ ನೀಡಿರುವುದಾಗಿ ತಿಳಿಸಿದ ಅವರು, ಒಂದು ವೇಳೆ ಅನಗತ್ಯ ಸಮಸ್ಯೆ ಆಗುತ್ತಿದ್ದರೆ ತಮ್ಮ ಗಮನಕ್ಕೆ ತರುವಂತೆ ಹೇಳಿದರು.

ಇದೇ ವೇಳೆ ಸರಕಾರದ ಮುಖ್ಯಕಾರ್ಯದರ್ಶಿ ಭಾಸ್ಕರ್‌ರಾವ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜಲ್‌ ಕೃಷ್ಣ ಉಪಸ್ಥಿತರಿದ್ದರು. 

ಈವರೆಗಿನ ಕಂಪನಿಗಳ ಕೊಡುಗೆ:

  • ಬ್ರಿಟಾನಿಯಾ ಕಂಪನಿಯಿಂದ ಆಹಾರ ಪದಾರ್ಥಗಳು 
  • ಟಿವಿಎಸ್‌ ಮೋಟಾರು ಸಂಸ್ಥೆಯಿಂದ 1 ಕೋಟಿ ರೂ. 
  • ಜಿಎಸ್‌ಕೆ ಸಂಸ್ಥೆ ಹಾಗೂ ಯೂನಿವರ್ಸಲ್‌ ಬಿಲ್ಡರ್ಸ್‌ ನಿಂದ ಎಲ್ಲಾ ಜಿಲ್ಲೆಯಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಪುನಶ್ಚೇತನಕ್ಕೆ ಆದ್ಯತೆ
  • ಶಾಹಿ ಎಕ್ಸ್‌ಪೋರ್ಟ್ಸ್‌ ನಿಂದ ಮಹಿಳೆಯರಿಗೆ ಸೀರೆ ಹಾಗೂ ಉಡುಪುಗಳ ನೆರವು

ನೆರವು ನೀಡಲು ಮುಂದಾಗಿರುವ ಸಂಸ್ಥೆಗಳು

  • ಕಾರ್ಪೋರೇಷನ್‌ ಬ್ಯಾಂಕ್‌ ನಿಂದ ದೇಣಿಗೆ
  • ಕ್ರೆಡಾಯ್ 3 ಕೋಟಿ ರೂಪಾಯಿ
  • ಟೊಯೋಟಾ ಸಂಸ್ಥೆಯಿಂದ 2 ಕೋಟಿ ರೂ
  • ಲೋಗೋ‌ಸ್‌ಗ್ರೂಪ್‌ 25 ಲಕ್ಷ ರೂ
  • ಯುನೈಟೆಡ್‌ ಟೆಕ್ನಾಲಜಿಸ್ ನಿಂದ ಅಗತ್ಯ ಮೂಲಸೌಕರ್ಯ
  • ಜೆಕೆ ಸಿಮೆಂಟ್ ನಿಂದ ಆಹಾರ ಪದಾರ್ಥಗಳ ವಿತರಣೆ
  • ವೋಲ್ವೋ ಗ್ರೂಪ್‌ನ ನೌಕರರ ಒಂದು ದಿನದ ಸಂಬಳ ಸೇರಿದಂತೆ ಇತರೆ ಕಂಪನಿಗಳಿಂದ ಸಹ ತಮ್ಮ‌ನೆರವಿನ ಭರವಸೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com