ಡಾ ವೀಣಾ ಬನ್ನಂಜೆ, ಡಾ ಧನಂಜಯ್ ಕುಂಬ್ಳೆ
ಡಾ ವೀಣಾ ಬನ್ನಂಜೆ, ಡಾ ಧನಂಜಯ್ ಕುಂಬ್ಳೆ

ಸಾಹಿತಿಗಳು ಸಮಾಜವನ್ನು ಒಡೆಯುವುದಿಲ್ಲ, ಬದಲಿಗೆ ಒಂದುಗೂಡಿಸುತ್ತಾರೆ: ಡಾ ಧನಂಜಯ್ ಕುಂಬ್ಳೆ  

ಸಾಹಿತ್ಯದ ಕೆಲಸ ಒಡೆಯುವುದಲ್ಲ, ಸಾಹಿತ್ಯ ಮತ್ತು ಸಾಹಿತಿಗಳು ಸಮಾಜವನ್ನು ಒಡೆಯುವುದಕ್ಕಿಂತ ಒಂದುಗೂಡಿಸಿದ್ದೇ ಹೆಚ್ಚು. ಸಾಹಿತಿಗಳು ಹೃದಯಗಳನ್ನು ಮೃದುಗೊಳಿಸಿ ಆದ್ರಗೊಳಿಸಿದ್ದಾರೆ. ಬದುಕನ್ನು ಸಹ್ಯಗೊಳಿಸಿದ್ದಾರೆ, ಮಾನವೀಯಗೊಳಿಸಿದ್ದಾರೆ ಎಂದು ಸಾಹಿತಿ ಮತ್ತು ಉಪನ್ಯಾಸಕ ಡಾ ಧನಂಜಯ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
Published on

ಪುತ್ತೂರು: ಸಾಹಿತ್ಯದ ಕೆಲಸ ಒಡೆಯುವುದಲ್ಲ, ಸಾಹಿತ್ಯ ಮತ್ತು ಸಾಹಿತಿಗಳು ಸಮಾಜವನ್ನು ಒಡೆಯುವುದಕ್ಕಿಂತ ಒಂದುಗೂಡಿಸಿದ್ದೇ ಹೆಚ್ಚು. ಸಾಹಿತಿಗಳು ಹೃದಯಗಳನ್ನು ಮೃದುಗೊಳಿಸಿ ಆದ್ರಗೊಳಿಸಿದ್ದಾರೆ. ಬದುಕನ್ನು ಸಹ್ಯಗೊಳಿಸಿದ್ದಾರೆ, ಮಾನವೀಯಗೊಳಿಸಿದ್ದಾರೆ ಎಂದು ಸಾಹಿತಿ ಮತ್ತು ಉಪನ್ಯಾಸಕ ಡಾ ಧನಂಜಯ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಡಿನ ಖ್ಯಾತ ಚಿಂತಕಿ ಡಾ.ವೀಣಾ ಬನ್ನಂಜೆಯವರು ಇತ್ತೀಚೆಗೆ ಮಾಡಿದ್ದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಹಿತಿಗಳು ಸಮಾಜವನ್ನು ಒಡೆಯುತ್ತಾರೆ. ಅವರು ಅವಿದ್ಯೆಯನ್ನು ಬಿತ್ತುತ್ತಾರೆ ಎಂದು ಹಲವು ವಿಷಯಗಳನ್ನು ಉದಾಹರಣೆಯಾಗಿ ಕೊಟ್ಟು ಹೇಳಿದ್ದರು. ಅವರ ಭಾಷಣದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಧನಂಜಯ್ ಕುಂಬ್ಳೆ, ಸಾಹಿತಿಗಳಾದ ನಾವು ಯಾರ ತಲೆ ಒಡೆದಿದ್ದೇವೆ ಎಂದು ಗೊತ್ತಿಲ್ಲ. ಸಮಾಜವನ್ನು ಒಡೆಯುವ ಶಕ್ತಿಗಳು ಯಾರ್ಯಾರು, ಏನೇನು ಎನ್ನುವುದು ಈ ನಾಡಿನ ಪ್ರಜ್ಞಾವಂತರಿಗೆ ತಿಳಿದಿದೆ. ಸಾಹಿತಿಗಳು, ಶಿಕ್ಷಕರು ಈ ಸಮಾಜವನ್ನು ಒಡೆಯುತ್ತಾರೆ, ಇಲ್ಲಿ ಅವಿದ್ಯೆಯನ್ನು ಬಿತ್ತುತ್ತಾರೆ, ಅವರನ್ನು ನಂಬಬೇಡಿ ಎನ್ನುವುದು ಕ್ಲೀಷೆಯ ಮಾತುಗಳು. ಇಂತಹ ಸಾರಾಸಗಟಾದ ಗುಡಿಸುವ ಮಾತುಗಳು ಯಾಕೆ ಬರುತ್ತವೆ ಎಂದು ಗೊತ್ತಾಗುತ್ತಿಲ್ಲ.  ಇಂತಹ ಆರೋಪಗಳು ಹೊಸದೇನಲ್ಲ, ಬಹಳ ಹಿಂದಿನಿಂದಲೂ ಇದೆ. ಆದರ್ಶ ರಾಜ್ಯದಲ್ಲಿ ಕವಿಗಳು ಬೇಡ, ಅವರನ್ನು ಹೊರಗಟ್ಟಿ ಎಂದು ಪ್ಲೇಟೋ ಹೇಳಿದ್ದರು.ಅದಕ್ಕೆ ಆ ಕಾಲದಲ್ಲಿಯೇ ಅವರ ಶಿಷ್ಯ ಅರಿಸ್ಟಾಟಲ್ ಉತ್ತರ ಸಹ ಕೊಟ್ಟಿದ್ದರು ಎಂದರು.


ನಾವು ಯಾರ ತಲೆ ಒಡೆದವರಲ್ಲ, ಎಲ್ಲಿಯೂ ಬಾಂಬು ಇಟ್ಟವರಲ್ಲ, ಯಾರ ಮುಂದೆಯೂ ಕತ್ತಿ ಝಳಪಿಸಿ ಹೆದರಿಸಿದವರಲ್ಲ. ನಾವು ಈ ಸಮಾಜದಲ್ಲಿ ಜಾತೀಯತೆಯನ್ನು ಒಡೆದಿದ್ದೇವೆ. ಮತಾಂಧತೆಯನ್ನು ಒಡೆದಿದ್ದೇವೆ. ಈ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಪ್ರಶ್ನೆ ಮಾಡಿದ್ದೇವೆ. ಇದು ಸಾಹಿತ್ಯದ ಕೆಲಸ ಎಂದು ನಾನು ಭಾವಿಸಿದ್ದೇನೆ ಎಂದರು.


ಸಾಹಿತ್ಯದ ಕೆಲಸ ಒಡೆಯುವುದಲ್ಲ, ಯಾವುದಾದರೂ ಒಡೆದಿದೆಯೆಂದರೆ ಅದು ಒಡೆಯಲು ಅರ್ಹತೆ ಪಡೆದಿದೆ ಎಂದರ್ಥ. ಒಡೆಯುವಿಕೆಯಲ್ಲಿಯೇ ಹೊಸ ಸೃಷ್ಟಿಗೆ ಅವಕಾಶಗಳ ಬಾಗಿಲು ತೆರೆಯುವುದು. ಮಣ್ಣಿನಲ್ಲಿ ಬಿತ್ತಿದ ಬೀಜದ ಆವರಣ ಒಡೆದೇ ಹೊಸ ಬೀಜ, ಜೀವ ಸೃಷ್ಟಿಯಾಗುವುದು. ಮಣ್ಣಿನಲ್ಲಿ ನೆಟ್ಟ ಗಿಡ ಮಣ್ಣನ್ನು ಸೀಳಿಯೇ ಬೇರುಗಳನ್ನು ಇಳಿಸುವುದು. ಒಡೆಯುವಿಕೆ ಕ್ರಿಯೆ ಸೃಷ್ಟಿಶೀಲ ಕ್ರಿಯೆ ಮತ್ತು ಬೇಕಾದ ಕ್ರಿಯೆ. ಹೀಗಾಗಿ ವಿನಾಕಾರಣ ಸಾಹಿತಿಗಳನ್ನು ಆಕ್ಷೇಪಿಸಬೇಡಿ, ಅವರಲ್ಲಿರುವ ಒಳ್ಳೆಯ ಅಂಶಗಳನ್ನು ನೋಡಿ, ಎಲ್ಲೋ ಯಾರೋ ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದಕ್ಕೆ ಇಡೀ ಸಾಹಿತ್ಯ ಲೋಕವನ್ನು ಅನುಮಾನದಲ್ಲಿ ನೋಡಬೇಡಿ ಎಂದು ಧನಂಜಯ್ ಕುಂಬ್ಳೆ ವಿನಂತಿ ಮಾಡಿಕೊಂಡರು.


ಸಾಹಿತ್ಯ ಸಮ್ಮೇಳನವನ್ನು ಹಿರಿಯ ಪತ್ರಕರ್ತ ಈಶ್ವರ ದೈತೋಟ ನೆರವೇರಿಸಿದರು. ಹಿರಿಯ ಉಪನ್ಯಾಸಕ, ಹವ್ಯಾಸ ಪತ್ರಕರ್ತ ನರೇಂದ್ರ ರೈ ದೇರ್ಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com