ಧಾರವಾಡದಿಂದ ದೆಹಲಿಗೆ ಪರಿಚಯವಾದ ಪೇಡಾ: ಎಲ್ಲ ಪ್ರಧಾನಿ ಮೋದಿ ಕೃಪೆ!
ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನಪ್ರಿಯ ಸಿಹಿತಿಂಡಿ ಧಾರವಾಡ ಪೇಡಾ ಸಂಸತ್ತು ಪ್ರವೇಶಿಸಿದೆ, ಎಲ್ಲವೂ ಪ್ರಧಾನಿ ನರೇಂದ್ರ ಮೋದಿಯ ಕೃಪೆಯಿಂದ.
ಕಳೆದ ತಿಂಗಳು ದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ, ಧಾರವಾಡದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಮ್ಮೂರಿನ ಪ್ರಖ್ಯಾತ ಧಾರವಾಡ ಪೇಡವನ್ನು ಗಿಫ್ಟ್ ಆಗಿ ಕೊಡುತ್ತಿದ್ದರು, ಆದರೆ ಇತ್ತೀಚೆಗೆ ನೀಡಿಲ್ಲ ಎಂದರು.
ಅವರು ಅಷ್ಟು ಹೇಳಿದ್ದೇ ತಡ ಪ್ರಹ್ಲಾದ್ ಜೋಷಿಯವರು 100 ಕೆಜಿ ಧಾರವಾಡ ಪೇಡಾಕ್ಕೆ ಆರ್ಡರ್ ಕೊಟ್ಟರು. ಅದರಲ್ಲಿ 65 ಕೆಜಿ ಪೇಡಾವನ್ನು ಪ್ರಧಾನ ಮಂತ್ರಿಗಳು, ಸಚಿವರುಗಳು, ಸಂಸದರು ಮತ್ತು ಅಧಿಕಾರಿಗಳಿಗೆ ಕೊಟ್ಟರೆ ಉಳಿದ 25 ಕೆಜಿಗಳನ್ನು ದೆಹಲಿಗೆ ಕಳುಹಿಸಿಕೊಟ್ಟರು.
ಇತ್ತೀಚೆಗೆ ದೆಹಲಿಯಲ್ಲಿ ಸಮಾರಂಭದಲ್ಲಿ ಪ್ರಧಾನಿಯವರು ಹಲವು ಭರವಸೆಗಳನ್ನು ಈಡೇರಿಸಿದ್ದಕ್ಕೆ ಎದ್ದುನಿಂತು ನಾವೆಲ್ಲ ಅಭಿನಂದನೆ ಸಲ್ಲಿಸಿದೆವು. ಆದರೆ ಕರ್ನಾಟಕದ ಬಿಜೆಪಿ ನಾಯಕರು ತಾವು ಮಾಡಿರುವ ಉತ್ತಮ ಕೆಲಸಗಳಿಗೆ ಪ್ರಶಂಸೆಗೆ ಅರ್ಹರಾಗಿರುತ್ತಾರೆ, ಅವರಿಗೆಲ್ಲ ಕೊಡಲು ಧಾರವಾಡ ಪೇಡಾ ತಂದುಕೊಡಿ ಎಂದು ಕೇಳಿದರು ಎಂದರು ಪ್ರಹ್ಲಾದ್ ಜೋಷಿ.
ಸಂಸತ್ತಿನಲ್ಲಿ ಪ್ರಹ್ಲಾದ್ ಜೋಷಿಯವರು ಧಾರವಾಡ ಪೇಡಾ ನೀಡುತ್ತಿರುವುದು ಇದೇ ಮೊದಲ ಸಲವಲ್ಲ. ಆದರೆ ಕಳೆದ ಆರು ತಿಂಗಳಿನಿಂದ ನೀಡಿರಲಿಲ್ಲ ಎಂದರು.
ದೇಶದ ಪ್ರಧಾನ ಮಂತ್ರಿ ತಾವು ತಯಾರಿಸುತ್ತಿರುವ ಪೇಡಾವನ್ನು ಇಷ್ಟಪಟ್ಟಿರುವುದಕ್ಕೆ ಧಾರವಾಡದ ಠಾಕೂರು ಪೇಡಾ ಕುಟುಂಬದ ಸದಸ್ಯರು ಸಂತೋಷಗೊಂಡಿದ್ದಾರೆ.
ಧಾರವಾಡ ಪೇಡಾವನ್ನು ಸಂಸತ್ತಿಗೆ ಪರಿಚಯಿಸಿದ ಸಚಿವ ಪ್ರಹ್ಲಾದ್ ಜೋಷಿಯವರಿಗೆ ನಾವು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಮಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. 19ನೇ ಶತಮಾನದ ಆದಿಭಾಗದಲ್ಲಿ ನಮ್ಮ ಮುತ್ತಾತ ಧಾರವಾಡದಲ್ಲಿ ಪೇಡಾ ವ್ಯಾಪಾರ ಆರಂಭಿಸಿದರು. ಇಂದು ದೇಶದ ರಾಜಕಾರಣಿಗಳು ಕೂಡ ಇಷ್ಟಪಟ್ಟಿರುವುದು ನಮಗೆ ಸಂತಸ ತಂದಿದೆ ಎಂದು ಠಾಕೂರ್ ಕುಟುಂಬ ಸದಸ್ಯರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ