ಮಂಗಳೂರಿನಲ್ಲಿ ಕೇರಳ ಪತ್ರಕರ್ತರ ಕ್ಯಾಮೆರಾ, ಫೋನ್ ಕಿತ್ತುಕೊಂಡ ಪೊಲೀಸರು

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾತ್ಮಕ ಪ್ರತಿಭಟನೆಯ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಸದ್ಯಕ್ಕೆ ಅಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರಿನಲ್ಲಿ ಪ್ರತಿಭಟನೆ
Updated on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಹಿಂಸಾತ್ಮಕ ಪ್ರತಿಭಟನೆಯ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಸದ್ಯಕ್ಕೆ ಅಲ್ಲಿನ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಈ ಮಧ್ಯೆ, ಹಿಂಸಾಚಾರದ ಕುರಿತು ವರದಿ ಮಾಡಲು ಆಗಮಿಸಿದ್ದ ಕೇರಳ ಪತ್ರಕರ್ತರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಬಳಿ ಇದ್ದ ಕ್ಯಾಮೆರಾ ಹಾಗೂ ಫೋನ್ ಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ ಅವರನ್ನು ಆದಷ್ಟು ಬೇಗ ಕೇರಳಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ ಗಾಯಗೊಂಡವರನ್ನು ದಾಖಲಿಸಲಾಗಿರುವ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಿಂದ ಸುದ್ದಿ ವಾಹಿನಿಯೊಂದು ಲೈವ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಪಿಎಸ್ ಹರ್ಷಾ ಅವರು ಸಹ ಕಾಣಿಸಿಕೊಂಡಿದ್ದಾರೆ. 

ಈ ವೇಳೆ ವಿಡಿಯೋ ಲೈವ್ ಮಾಡುತ್ತಿದ್ದ ಟಿವಿ ವರದಿಗಾರನನ್ನು ಪೊಲೀಸರು ಪ್ರಶ್ನಿಸಿದ್ದು, ಆತ ತನ್ನ ಗುರುತಿನ ಚೀಟಿ ತೋರಿಸಿದ್ದಾರೆ. ಆದರೆ ರಾಜ್ಯ ಸರ್ಕಾರದಿಂದ ಪಡೆದ ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ. ವರದಿಗಾರನ ಬಳಿ ಸರ್ಕಾರದಿಂದ ಪಡೆದ ಐಡಿ ಕಾರ್ಡ್ ಇಲ್ಲದ ಕಾರಣ ಆ ಪತ್ರಕರ್ತ ಸೇರಿದಂತೆ ಇತರೆ ವರದಿಗಾರರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿ, ಅವರ ಫೋನ್ ಮತ್ತು ಕ್ಯಾಮೆರಾಗಳನ್ನು ಕಿತ್ತುಕೊಂಡಿದ್ದಾರೆ ಮತ್ತು ಅವರನ್ನು ಭೇಟಿ ಮಾಡಲು ಸ್ಥಳೀಯ ವರದಿಗಾರರಿಗೂ ಅವಕಾಶ ನೀಡಿಲ್ಲ.

ಮಂಗಳೂರು ಪೊಲೀಸರ ಈ ಕ್ರಮ ಖಂಡಿಸಿ ಕಾಸರಗೊಡು ಪತ್ರಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಮುಖ ಘಟನೆಗಳು ನಡೆದಾಗ ಗಡಿ ರಾಜ್ಯದ ಪತ್ರಕರ್ತರು ಬಂದು ವರದಿ ಮಾಡುವುದು ಸಾಮಾನ್ಯ. ಕರ್ನಾಟಕದ ಪತ್ರಕರ್ತರು ಸಹ ಶಬರಿಮಲೆಗೆ ಬಂದು ವರದಿ ಮಾಡಿದ್ದರು ಎಂದು ಆಂಗ್ಲ ದಿನಪತ್ರಿಕೆಯ ವರದಿಗಾರರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಕೇರಳ ಪತ್ರಕರ್ತರು ವರದಿ ಮಾಡದಂತೆ ತಡೆದಿರುವ ಪೊಲೀಸರ ಕ್ರಮ ಖಂಡನೀಯ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com