ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಟಿಎಂಸಿಯಿಂದ ಪರಿಹಾರ ವಿತರಣೆ

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಿಂದ ಮೃತಪಟ್ಟವರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ ಶನಿವಾರ ಪರಿಹಾರದ ಚೆಕ್ ವಿತರಣೆ ಮಾಡಿದೆ.
ಕುಟುಂಬಕ್ಕೆ ಚೆಕ್ ನೀಡುತ್ತಿರುವ ದಿನೇಶ್ ತ್ರಿವೇದಿ
ಕುಟುಂಬಕ್ಕೆ ಚೆಕ್ ನೀಡುತ್ತಿರುವ ದಿನೇಶ್ ತ್ರಿವೇದಿ
Updated on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಿಂದ ಮೃತಪಟ್ಟವರ ಕುಟುಂಬಕ್ಕೆ ತೃಣಮೂಲ ಕಾಂಗ್ರೆಸ್ ಶನಿವಾರ ಪರಿಹಾರದ ಚೆಕ್ ವಿತರಣೆ ಮಾಡಿದೆ.

ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ಒಂದೇ ಒಂದು ರೂಪಾಯಿ ಪರಿಹಾರ ಕೊಡುವುದಿಲ್ಲ ಎಂದು ಹೇಳಿದ ನಂತರ  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಹಾರ ಘೋಷಿಸಿದ್ದು, ಇಂದು ನೊಂದ ಕುಟುಂಬಕ್ಕೆ ಪಕ್ಷದ ವತಿಯಿಂದ ಚೆಕ್ ವಿತರಿಸಲಾಯಿತು.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿತ್ತು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ನೌಶಿನ್, ಜಲೀಲ್ ಎಂಬ ಇಬ್ಬರು ಮೃತಪಟ್ಟಿದ್ದರು.  

ಈ ಘಟನೆ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಘೋಷಿಸಿದ್ದರು. ಇದಾದ ಬಳಿಕ ತಮ್ಮ ಹೇಳಿಕೆ ಹಿಂಪಡೆದ ಸಿಎಂ, ಮೃತರು ಗಲಭೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆ ತನಿಖೆ ಬಳಿಕ ಪರಿಹಾರ ನೀಡಲಾಗುವುದು ಎಂದಿದ್ದರು. 

ಅದಾದ ನಂತರ ಮತ್ತೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಯಡಿಯೂರಪ್ಪ, ಒಂದೇ ಒಂದು ರೂಪಾಯಿ ಪರಿಹಾರ ನೀಡುವುದಿಲ್ಲ  ಎಂದು ಪದೇ ಪದೇ ಹೇಳಿಕೆ ಬದಲಾಯಿಸಿದ್ದರು. ಈ ಹೇಳಿಕೆಯ ಪರ ಮತ್ತು ವಿರೋಧದ ಚರ್ಚೆ ನಡೆದು ರಾಜಕೀಯ  ಹೋರಾಟಕ್ಕೂ ವೇದಿಕೆ ಒದಗಿಸಿದೆ. 

ಬಿಎಸ್ವೈರ ಈ ಕ್ರಮಕ್ಕೆ  ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಇದಾದ ಬಳಿಕ, ಮಮತಾ ಬ್ಯಾನರ್ಜಿ ಮಂಗಳೂರು ಗೋಲಿಬಾರ್ ಘಟನೆಗೆ ಸ್ಪಂದಿಸಿದ್ದರು. ಅಲ್ಲದೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಇಂದು ಮಂಗಳೂರಿಗೆ ಆಗಮಿಸಿದ ಟಿಎಂಸಿ ಹಿರಿಯ ನಾಯಕ ದಿನೇಶ್ ತ್ರಿವೇದಿ, ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಿಸಿದರು.

ಒಂದೆಡೆ ಪರಿಹಾರ ನೀಡುವುದಿಲ್ಲ ಎಂಬ ಯಡಿಯೂರಪ್ಪ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದರೆ, ಮತ್ತೊಂದೆಡೆ  ಗಲಭೆಯಲ್ಲಿ ಭಾಗಿಯಾದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬಿಜೆಪಿಯ ಹಲವು ನಾಯಕರು ಹೇಳಿಕೆ ನೀಡುತ್ತಿದ್ಧಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದವರ ಆಸ್ತಿಯನ್ನು ಮುಟ್ಟುಹೋಲು ಹಾಕುವ ಹೊಸ ಯೋಜನೆಗೆ ಕೈಹಾಕಿದೆ. ಇದನ್ನೇ ಉಲ್ಲೇಖಿಸಿ, ಕಂದಾಯ ಸಚಿವ ಆರ್ ಅಶೋಕ್ ಗಲಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರ ಖಾಸಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಹಲವು ಸಚಿವರೂ  ಬೆಂಬಲ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com