ಸೆನೆಗಲ್ ನಲ್ಲಿ ಆಂಟನಿ ಫರ್ನಾಂಡಿಸ್ ಹೆಸರಿನಲ್ಲಿ ರೆಸ್ಟೊರೆಂಟ್ ನಡೆಸುತ್ತಿದ್ದ ರವಿ ಪೂಜಾರಿ

ಸೆನೆಗಲ್ ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯ ಹಿನ್ನಲೆ, ಆತ ಮಾಡುತ್ತಿದ್ದ ಕೆಲಸಗಳ ...
ರವಿ ಪೂಜಾರಿ
ರವಿ ಪೂಜಾರಿ
Updated on

ಬೆಂಗಳೂರು: ಸೆನೆಗಲ್ ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯ ಹಿನ್ನಲೆ, ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಈತನಿಗೆ ಬಾಲಿವುಡ್ ಜೊತೆ ಕೂಡ ನಂಟಿತ್ತು. ಕಳೆದ ಜನವರಿ 19ರಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಜಧಾನಿ ದಾಕರ್ ನಲ್ಲಿ ರವಿ ಪೂಜಾರಿ ಬಂಧನದಲ್ಲಿ ಕರ್ನಾಟಕ ಪೊಲೀಸರ ಪಾತ್ರ ಮಹತ್ವದ್ದು.

ರವಿ ಪೂಜಾರಿ ಸೆನೆಗಲ್ ನಲ್ಲಿ ಇದ್ದುಕೊಂಡು ಭಾರತದ ಉದ್ಯಮಿಗೆ ಸುಲಿಗೆಗೆ ಬೆದರಿಕೆ ಕರೆಗಳನ್ನು ಮಾಡುತ್ತಲೇ ಇದ್ದ. ದಾಕಾರ್ ನ ಸೆಲೂನ್ ಒಂದರಲ್ಲಿ ರವಿ ಪೂಜಾರಿ ಕುಳಿತಿದ್ದಾಗ ಬಂಧಿಸಲಾಗಿದೆ. ಮೂರು ವಾಹನಗಳಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಪೊಲೀಸರು ಸೆಲೂನ್ ಮೇಲೆ ಹಠಾತ್ ದಾಳಿ ನಡೆಸಿ ಬಂಧಿಸಿದ್ದಾರೆ.

ರವಿ ಪೂಜಾರಿಯನ್ನು ಬಂಧಿಸುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆದೇಶ ನೀಡಿದ ನಂತರ ಬಂಧನಕ್ಕೆ ಪೊಲೀಸರ ಕಾರ್ಯ ತೀವ್ರಗೊಂಡಿತು.

ಕಳೆದ ಜೂನ್ ನಲ್ಲಿಯೇ  ಪೂಜಾರಿಯನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು ಎನ್ನುತ್ತಾರೆ ರಾಜ್ಯ ಜಾಗೃತ ದಳದ ಮುಖ್ಯಸ್ಥ ಎಡಿಜಿಪಿ ಅಮರ್ ಕುಮಾರ್ ಪಾಂಡೆ. ಆಗ ಅವನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ದೆಹಲಿಯ ರಾಷ್ಟ್ರೀಯ ಅಪರಾಧ ವಿಭಾಗದ ಮೂಲಕ ದಾಕರ್ ನ ಇಂಟರ್ ಪೋಲ್ ಸಂಪರ್ಕಿಸಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು.

ಪಶ್ಚಿಮ ಆಫ್ರಿಕಾ ರಾಷ್ಟ್ರಗಳಾದ ಬುರ್ಕಿನಾ ಫಾಸೊ, ಗ್ವೈನಿಯಾ, ಐವರಿ ಕೋಸ್ಟ್ ಮತ್ತು ಸೆನೆಗಲ್ ಗಳಲ್ಲೆಲ್ಲಾ ರವಿ ಪೂಜಾರಿ ಪ್ರಯಾಣಿಸುತ್ತಿದ್ದ. ಅಲ್ಲಿ ರೆಸ್ಟೊರೆಂಟ್ ಒಂದನ್ನು ನಡೆಸುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಆ ದೇಶಗಳಲ್ಲಿ ನೆಲೆಸಲು ರವಿ ಪೂಜಾರಿ ಆಂಟೊನಿ ಫರ್ನಾಂಡಿಸ್ ಎಂಬ ಹೆಸರಿನಲ್ಲಿ ಅಗತ್ಯ ದಾಖಲೆಗಳನ್ನು ಕೂಡ ಹೊಂದಿದ್ದ.

ಎಡಿಜಿಪಿ ಪಾಂಡೆಗೆ ರವಿ ಪೂಜಾರಿಯ ಚಲನವಲನಗಳ ಬಗ್ಗೆ ಮಾಹಿತಿ ಸಿಗುತ್ತಿತ್ತು. ಸೆನೆಗಲ್ ಗೆ ರವಿ ಪೂಜಾರಿ ಹೋದ ನಂತರ ಅಲ್ಲಿನ ಭಾರತದ ರಾಯಭಾರಿಯಾಗಿರುವ ರಾಜೀವ್ ಕುಮಾರ್ ಜೊತೆ ಪಾಂಡೆ ಮಾತುಕತೆ ನಡೆಸಿದ್ದರು. ನಂತರ ಅಲ್ಲಿನ ಆಂತರಿಕ ಸಚಿವಾಲಯ ಮತ್ತು ರಾಷ್ಟ್ರಪತಿ ಕಚೇರಿಯಲ್ಲಿ ಸಹ ರವಿ ಪೂಜಾರಿಯ ಬಗ್ಗೆ ಮಾತುಕತೆ, ಚರ್ಚೆ ನಡೆದಿದ್ದವು.
ರವಿ ಪೂಜಾರಿಯನ್ನು ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಅಲಿ ತಿಳಿಸಿದ್ದಾರೆ. ದಾಕಾರ್ ಪೊಲೀಸರು ಅಲ್ಲಿರುವ ಪೂಜಾರಿ ಮನೆಗೆ ವಿಚಕ್ಷಣಾ ದಳವನ್ನು ನೇಮಿಸಿ ಕಣ್ಗಾವಲು ಇರಿಸಿದ್ದಾರೆ.

ಕಳೆದ ಜನವರಿ 19ರಂದು ರವಿ ಪೂಜಾರಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಜನವರಿ 21ರಂದು ಆತನ ಬಂಧನ ಮತ್ತು ಗಡೀಪಾರನ್ನು ಖಚಿತಪಡಿಸಲಾಯಿತು. ಆತನನ್ನು ಪತ್ತೆಹಚ್ಚುವುದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು ಎನ್ನುತ್ತಾರೆ ರಾಜ್ಯ ಪೊಲೀಸರು.

ರವಿ ಪೂಜಾರಿ ತನಗೆ ಮಾಹಿತಿ ನೀಡುತ್ತಿದ್ದವರಿಂದ ತನಗೆ ಬೇಕೆಂದ ನಟರು, ರಾಜಕಾರಣಿಗಳು, ಉದ್ಯಮಿಗಳು, ಆಭರಣ ವ್ಯಾಪಾರಿಗಳು, ವೈದ್ಯರು ಮತ್ತು ಇತರರ ಫೋನ್ ನಂಬರ್ ಗಳನ್ನು ಪಡೆದು ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ಎಂದು ಹೇಳಿಕೆಯೊಂದು ತಿಳಿಸುತ್ತದೆ.

ಸುಮಾರು 2 ದಶಕಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ರವಿ ಪೂಜಾರಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. 2001ರಲ್ಲಿ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣದಲ್ಲಿ ರವಿ ಪೂಜಾರಿ ಹೆಸರು ಕೇಳಿಬಂದಿತ್ತು. ಆಸ್ಟ್ರೇಲಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದ ರವಿ ಪೂಜಾರಿ ಆಗಾಗ ಉದ್ಯಮಿಗಳಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com