
ತರೀಕೆರೆ: ಸಮಾಜದಲ್ಲಿ ಕನಿಷ್ಠ ಗೌರವ, ಅಸಭ್ಯ ವರ್ತನೆ, ಲೈಂಗಿಕ ಪ್ರಚೋದನೆ ಮತ್ತಿತರ ಕಾರಣಗಳಿಂದಾಗಿ ತೃತೀಯಲಿಂಗಿಗಳನ್ನು ಕಳಂಕಿತ ಸಮುದಾಯದ ರೀತಿಯಲ್ಲಿ ನೋಡಲಾಗುತ್ತದೆ. ಆದರೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರದಲ್ಲಿ 8 ಮಂದಿ ತೃತೀಯ ಲಿಂಗಿಗಳ ಗುಂಪು ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡಿದ್ದಾರೆ.
ನಾಲ್ಕು ವರ್ಷಗಳಿಂದ 4.5 ಎಕರೆ ಜಮೀನಿನಲ್ಲಿ ಅವರು ಕೃಷಿ ಮಾಡುವ ಮೂಲಕ ಸುಂದರ ಬದುಕು ರೂಪಿಸಿಕೊಂಡಿದ್ದಾರೆ.ಇದರಲ್ಲಿ ಎರಡು ಎಕರೆ ಜಮೀನನ್ನು ಬೇರೊಬ್ಬರಿಂದ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಅಂಜು,ಆಕೆಯ ಸ್ನೇಹಿತೆಯರಾದ ಸ್ಪೂರ್ತಿ, ಮೇಘಾ ಮಲ್ನಾಡ್, ಪ್ರೇಮ, ಹರ್ಷಿತಾ, ಭಾಗ್ಯ, ಕಾವ್ಯ ಮತ್ತು ಅಭಿಷೇಕ್ ಬೇಸಾಯ ಮಾಡುವ ಮೂಲಕ ಸ್ವತಂತ್ರವಾದ ಜೀವನ ಸಾಗಿಸುತ್ತಿದ್ದಾರೆ.
ಹತ್ತನೆ ತರಗತಿಯಲ್ಲಿದ್ದಾಗ ಹಳ್ಳಿಯನ್ನು ತೊರೆದ ಅಂಜು ಮೈಸೂರಿನಲ್ಲಿ ಮತ್ತೊಬ್ಬ ತೃತೀಯಲಿಂಗಿ ಜೊತೆಗೂಡಿ ಮುಂಬೈ ಹಾಗೂ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡಿದ್ದಾರೆ. ದಿನಕಳೆದಂತೆ ಆಕೆಯ ಬಗ್ಗೆ ನೋವಿನ ಭಾವನೆ ಉಂಟಾಗಿ ಸ್ವತಂತ್ರವಾಗಿ ಜೀವಿಸಬೇಕೆಂಬ ನಿರ್ಧಾರಕ್ಕೆ ಬಂದರಂತೆ. ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಒಬ್ಬ ತೃತೀಯ ಲಿಂಗಿಗಳು ತಪ್ಪು ಮಾಡಿದರೆ ಇಡೀ ಸಮುದಾಯದತ್ತ ಬೆರಳು ಮಾಡಿ ತೋರಿಸಲಾಗುತ್ತದೆ. ಮತ್ತೆ ಬಂದು ಕುಟುಂಬದೊಂದಿಗೆ ಜೀವಿಸೋಣ ಎಂದರೆ ಅವರು ಸೇರಿಸಿಕೊಳ್ಳಲಿಲ್ಲ,ಈ ಮಧ್ಯೆ ಕೆಲವು ಜನರು ನನನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಈ ಎಲ್ಲಾ ನಿಂದನೆಗಳನ್ನು ಸಹಿಸಿ ಏನಾದರೂ ಮಾಡಿ ತೋರಿಸಬೇಕೆಂಬ ಛಲದೊಂದಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಿಂದ ಕೃಷಿ ಬಗ್ಗೆ ತರಬೇತಿ ಪಡೆದು ನಾಲ್ಕು ವರ್ಷದ ಹಿಂದೆ ಹಸು ಕೊಂಡುಕೊಂಡಿದ್ದಾಗಿ ಹೇಳುವ ಅಂಜು, ನಂತರ ವಂಶಪಾರಂಪರ್ಯವಾಗಿ ಬಂದ ಎರಡು ಎಕರೆ ಜಮೀನು ಪಡೆದುಕೊಂಡಿದ್ದಾಗಿ ತಿಳಿಸಿದರು.
Advertisement