ಸುತ್ತೂರು ಜಾತ್ರೆಯಲ್ಲಿ ಗ್ಯಾಸ್ ಬಲೂನ್ ಸ್ಫೋಟ: ಶ್ರೀಗಳು ಪಾರು, ತಪ್ಪಿದ ಭಾರಿ ಅನಾಹುತ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ...
ಬಲೂನ್ ಸ್ಫೋಟಕ್ಕು ಮುನ್ನ, ಬಲೂನ್ ಸ್ಫೋಟದ ನಂತರ
ಬಲೂನ್ ಸ್ಫೋಟಕ್ಕು ಮುನ್ನ, ಬಲೂನ್ ಸ್ಫೋಟದ ನಂತರ
ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ನೈಟ್ರೋಜನ್(ಗ್ಯಾಸ್) ಬಲೂನ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಜಾತ್ರೆಯಲ್ಲಿ ಶ್ರೀಗಳು ಗ್ಯಾಸ್ ಬಲೂನ್ ಹಾರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದರು. ಆದರೆ ಶ್ರೀಗಳು ಬಲೂನ್ ಹಾರಿಸುವ ಮೊದಲೇ ಸ್ಫೋಟಗೊಂಡಿದೆ.
ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮತ್ತಿತರ ಗಣ್ಯರು ಕುಸ್ತಿ ಪಂದ್ಯಾವಳಿ ಉದ್ಘಾಟನೆ ಮಾಡುತ್ತಿದ್ದಾಗ ಪಕ್ಕದಲ್ಲೇ ಇದ್ದ ನೈಟ್ರೋಜನ್​ ಬಲೂನ್​ ದಿಢೀರನೆ ಸ್ಫೋಟವಾಗಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕ್ಷಣಮಾತ್ರದಲ್ಲಿ ಬಲೂನ್​ ಸ್ಫೋಟವಾಗಿ ಬೆಂಕಿ ಸುತ್ತಲೂ ಆವರಿಸಿಕೊಂಡಿದೆ. ಸುತ್ತೂರು ಶ್ರೀಗಳಿಗೂ ಬೆಂಕಿ ತಗುಲಿದ್ದು, ಹೆಚ್ಚಿನ ಗಾಯಗಳಾಗಿಲ್ಲ.
ಘಟನೆಯಲ್ಲಿ ಮರಿತಿಬ್ಬೇಗೌಡ, ಕಲಮಳ್ಳಿ ಶಿವಕುಮಾರ್, ಹೊಸಕೋಟೆ ದೇವಣ್ಣ ಮತ್ತು ಇತರ ಮೂವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅವರಿಗೆ ಕೂಡಲೇ ಸುತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಘಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುತ್ತೂರು ಶ್ರೀಗಳು, ಇದೊಂದು ದುರದೃಷ್ಟಕರ ಘಟನೆ,  ಯಾವುದೇ ಹಾನಿ ಇಲ್ಲದೆ ತಾವು ಪಾರಾಗಿದ್ದು, ಗಾಯಗೊಂಡವರಿಗೆ  ಜಾತ್ರಾ ಅಂಗವಾಗಿ ಆರಂಭಿಸಿರುವ  ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ. ಜನರು ಯಾವುದೇ ಭೀತಿಗೆ ಒಳಗಾಗಬಾರದು ಎಂದು ಅವರು ಭಕ್ತರಿಗೆ ಮನವಿ ಮಾಡಿಕೊಂಡರು. ಸ್ವಲ್ಪ ಸಮಯದ ನಂತರ ಕುಸ್ತಿ ಪಂದ್ಯಗಳು ನಡೆದವು.

ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಹಲವು ಸಚಿವರುಗಳು, ಸ್ವಾಮೀಜಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಘಟನೆಯ ಕುರಿತು ಮಾಹಿತಿ ಪಡದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com