ಬೆಂಗಳೂರು: ಫಿಲಿಫೈನ್ಸ್ ನಲ್ಲಿ ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ಮೂಲದ ವಿಮಾನ ಪೈಲಟ್ ಹಾಗೂ ಆತನ ವಿದ್ಯಾರ್ಥಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಪೈಲಟ್ ನವೀನ್ ಎನ್ ಅವರು ತಮ್ಮ ವಿದ್ಯಾರ್ಥಿ ಪೈಲಟ್ ಕುಲದೀಪ್ ಸಿಂಗ್ ಅವರಿಗೆ ತರಬೇತಿ ನೀಡುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನ ಇದೀಗ ನಾಪತ್ತೆಯಾಗಿದೆ.
ಪ್ಲ್ಯಾರಿಡೆಲ್ ಮತ್ತು ಸಬಿಕ್ ವಿಮಾನ ನಿಲ್ದಾಣಗಳ ಮಧ್ಯ ತರಬೇತಿನಿರತ ವಿಮಾನ ನಾಪತ್ತೆಯಾಗಿದೆ ಎಂದು ಫಿಲಿಫೈನ್ಸ್ ವಿಮಾನಯಾನ ನಿಯಂತ್ರಕ ಬುಧವಾರ ತಿಳಿಸಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ಪ್ಲ್ಯಾರಿಡೆಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ 30 ವರ್ಷದ ನವೀನ್ ಹಾಗೂ ಕುಲದೀಪ್ ಸಿಂಗ್ ಇದ್ದ ಸೆಸ್ನಾ ಸಿ-152 ವಿಮಾನ ಸಂಬಲ್ - ಬಟಾನ ಪ್ರದೇಶದಲ್ಲಿ ನಾಪತ್ತೆಯಾಗಿದೆ.
ಕ್ಯಾಪ್ಟನ್ ನವೀನ್ ಅವರು ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಯಾಗಿದ್ದು, ಅವರ ತಂದೆ ನಾಗರಾಜ್ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಒಂದು ದಿನಕ್ಕಿಂತ ಹೆಚ್ಚು ಸಮಯ ನವೀನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಮಂಗಳವಾರ ಫಿಲಿಫೈನ್ಸ್ ಗೆ ತೆರಳಿದ್ದಾರೆ.