ರಾಯಚೂರು: ಆಧಾರ್ ಕಾರ್ಡಿನಲ್ಲಿ ಮತ್ತು ಚುನಾವಣಾ ಆಯೋಗದ ಗುರುತು ಪತ್ರದಲ್ಲಿ ಜನ್ಮದಿನಾಂಕ ವ್ಯತ್ಯಾಸದಿಂದಾಗಿ ಶೇಖ್ ಮಹಿಮೂದ್ ಮತ್ತು ಅವರ ಪತ್ನಿ ಬಿಬಿ ಕಳೆದ ಹಲವು ತಿಂಗಳುಗಳಿಂದ ತಿಂಗಳ ಪಿಂಚಣಿ ಪಡೆದಿಲ್ಲ.
ರಾಯಚೂರು ಜಿಲ್ಲೆಯ ಇನ್ನೂ ಕೆಲವು ಹಿರಿಯ ನಾಗರಿಕರು ಪಿಂಚಣಿ ಯೋಜನೆಯಿಂದ ವಂಚಿತರಾಗಿದ್ದಾರೆ. ಆಧಾರ್ ಕಾರ್ಡಿನಲ್ಲಿ ಹುಟ್ಟಿದ ದಿನಾಂಕದಲ್ಲಿ ವ್ಯತ್ಯಾಸವಿರುವುದರಿಂದ ಪಿಂಚಣಿ ಸೌಲಭ್ಯ ಅವರಿಗೆ ಸಿಗುತ್ತಿಲ್ಲ.
69 ವರ್ಷದ ಮಹಿಮೂದ್ ಅವರಿಗೆ ತಿಂಗಳಿಗೆ 500 ರೂಪಾಯಿ ಪಿಂಚಣಿ ಅಂಚೆ ಮೂಲಕ ಬರುತ್ತಿತ್ತು. ಆದರೆ 11 ತಿಂಗಳಿನಿಂದ ಆ ಪಿಂಚಣಿ ಅವರಿಗೆ ಸಿಗುತ್ತಿಲ್ಲ. ಆಧಾರ್ ಕಾರ್ಡಿನಲ್ಲಿ ಹುಟ್ಟಿದ ದಿನಾಂಕ ವ್ಯತ್ಯಾಸ ಕಂಡುಬಂದ ನಂತರ ಅವರೀಗ ಜಿಲ್ಲಾ ಆಧಾರ್ ಸಮನ್ವಯ ಅಧಿಕಾರಿಯನ್ನು ಸಂಪರ್ಕಿಸಿದರೆ ಇಲ್ಲಾಗುವುದಿಲ್ಲ, ಆಧಾರ್ ನ ಸ್ಥಳೀಯ ಕಚೇರಿಯಲ್ಲಿ ಮನವಿ ಸಲ್ಲಿಸಿ ಹುಟ್ಟಿದ ದಿನಾಂಕ ಬದಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಜನವರಿಯಿಂದ ವಾರಕ್ಕೆ ಐದರಿಂದ ಆರು ಮಂದಿ ವೃದ್ಧರು ಇಂತಹ ದೂರುಗಳನ್ನು ಆಧಾರ್ ಕಚೇರಿಗೆ ಹೊತ್ತುಕೊಂಡು ಬರುತ್ತಾರಂತೆ. ಮಹಿಮೂದ್ ಅವರ ಆಧಾರ್ ಕಾರ್ಡಿನಲ್ಲಿ ಅವರ ಜನ್ಮದಿನಾಂಕ 1964 ಎಂದು ಇದೆ. ಅದರಂತೆ ಅವರ ವಯಸ್ಸು 55 ವರ್ಷ. ಆದರೆ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಲು 60 ವರ್ಷವಾಗಬೇಕು. ರಾಜ್ಯ ಸರ್ಕಾರದಿಂದ ಪಿಂಚಣಿ ಯೋಜನೆ ಸೌಲಭ್ಯ ಪಡೆಯಲು 65 ವರ್ಷವಾಗಬೇಕು. ಜನ್ಮ ದಿನಾಂಕ ಬದಲಿಸಬೇಕೆಂದರೆ ಮಹಿಮೂದ್ ಗೆ ಆಧಾರ್ ನ ಸ್ಥಳೀಯ ಕಚೇರಿಯಾದ ಬೆಂಗಳೂರಿಗೆ ಹೋಗಬೇಕಾಗುತ್ತದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಹಿಮೂದ್, ನನಗೆ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಜನ್ಮದಿನಾಂಕ ಬದಲಿಸಲು 400 ಕಿಲೋ ಮೀಟರ್ ದೂರದವರೆಗೆ ಹೋಗಬೇಕೆಂದರೆ ಹೇಗೆ ಎಂದು ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾರೆ.
Advertisement