ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ: ನಿಯಮಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಚಿಂತನೆ
ಬೆಂಗಳೂರು: ರಾಜ್ಯ ಸಚಿವ ಸಂಪುಟ ಮೂರು ದಶಕಗಳ ಹಳೆಯ ಡಾ ಸರೋಜಿನಿ ಮಹಿಷಿ ಸಮಿತಿಯ ಶಿಫಾರಸನ್ನು ಜಾರಿಗೆ ತರಲು ನಿರ್ಧರಿಸಿದೆ.
ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಸಂಖ್ಯೆ 1961ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸಚಿವ ಸಂಪುಟ ಸಮಿತಿ ಖಾಸಗಿ ಸಂಸ್ಥೆಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಯಲ್ಲಿ ಶೇಕಡಾ 100ರಷ್ಟು ಮೀಸಲಾತಿಯನ್ನು ಕನ್ನಡಿಗರಿಗೆ ನೀಡಬೇಕು ಎಂಬ ಶಿಫಾರಸನ್ನು ಜಾರಿಗೆ ತರಲು ಮುಂದಾಗಿದೆ.
ಶಿಫಾರಸಿಗೆ ಇದುವರೆಗೆ ಯಾವುದೇ ಕಾನೂನು ಅಡತಡೆಗಳು ಎದುರಾಗಿಲ್ಲ. ಕರ್ನಾಟಕದಲ್ಲಿ ಸ್ಥಾಪನೆ ಮಾಡಿರುವ ಕಂಪೆನಿ, ಕೈಗಾರಿಕೆಗಳು ಸರ್ಕಾರದಿಂದ ಯಾವುದೇ ರೀತಿಯ ರಿಯಾಯಿತಿ ಪಡೆಯುತ್ತಿದ್ದರೆ ಅಲ್ಲಿ ಕನ್ನಡಿಗರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕಾಗಿದೆ , ಅದಕ್ಕೆ ಸರ್ಕಾರ ಕಾನೂನಾತ್ಮಕವಾಗಿ ಬಲ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಪೂರ್ಣ ಪ್ರಮಾಣದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಪ್ರಯತ್ನಕ್ಕೆ ಪೂರ್ಣ ಸಮ್ಮತಿ ಸಿಗದ ಹಿನ್ನೆಲೆಯಲ್ಲಿ ಆದ್ಯತೆ ಮೇಲೆ ಉದ್ಯೋಗ ಕಲ್ಪಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಸರ್ಕಾರದಿಂದ ಪ್ರೋತ್ಸಾಹ ಧನ, ತೆರಿಗೆ, ವಿದ್ಯುತ್ ದರ ರಿಯಾಯಿತಿ ಪಡೆಯುವ ಕಂಪನಿಗಳಲ್ಲಿ ಹುದ್ದೆಗಳು ಲಭ್ಯವಿದ್ದಲ್ಲಿ ಕನ್ನಡಿಗರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಸಿ ಮತ್ತು ಡಿ ದರ್ಜೆ ಕೆಲಸ ಕೊಡಬೇಕಿದೆ. ವಿಕಲಚೇತನರಿಗೆ ಶೇಕಡಾ 5 ರಷ್ಟು ಮೀಸಲಾತಿ ಕಲ್ಪಿಸಲಾಗುವುದು. ಕರ್ನಾಟಕ ಔದ್ಯೋಗಿಕ ಕೈಗಾರಿಕೆ ಉದ್ಯೋಗಗಳ ನಿಯಮಾವಳಿಗಳು ಅನುಮೋದನೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ