ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗಾಗಿ ಮಹಾಲಕ್ಷ್ಮಿ, ಅನ್ನಪೂರ್ಣೇಶ್ವರಿ ಯೋಜನೆ ಪ್ರಕಟ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಸ್.ಪಿ. ಹೇಮಲತಾ ಇಂದು ಮಂಡಿಸಿದ 2019-20ನೇ ಸಾಲಿನ ....
ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗಾಗಿ ಮಹಾಲಕ್ಷ್ಮಿ, ಅನ್ನಪೂರ್ಣೇಶ್ವರಿ ಯೋಜನೆ ಪ್ರಕಟ
ಬಿಬಿಎಂಪಿ ಬಜೆಟ್ 2019: ಮಹಿಳೆಯರಿಗಾಗಿ ಮಹಾಲಕ್ಷ್ಮಿ, ಅನ್ನಪೂರ್ಣೇಶ್ವರಿ ಯೋಜನೆ ಪ್ರಕಟ
Updated on
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷೆ  ಎಸ್.ಪಿ. ಹೇಮಲತಾ  ಇಂದು ಮಂಡಿಸಿದ  2019-20ನೇ  ಸಾಲಿನ 10,691. 82 ಕೋಟಿ ರೂ. ಮೊತ್ತದ ಅಯವ್ಯಯದಲ್ಲಿ ಮಹಿಳಾ ಅಭಿವೃದ್ಧಿಗೆ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ.
ಹೆಣ್ಣುಮಕ್ಕಳ ಶಿಕ್ಷಣ, ವಿವಾಹಕ್ಕೆ ನೆರವಾಗುವ ಯೋಜನೆಗಳ ಜೊತೆಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಸ್ವ ಉದ್ಯೋಗ, ಉಚಿತ ಆರೋಗ್ಯ ತಪಾಸಣೆ ಸೇರಿ ಹಲವು ಮಹತ್ತರ ಯೋಜನೆಗಳನ್ನು ಈ ಸಾಲಿನ ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೊಸದಾಗಿ 'ಮಹಾಲಕ್ಷ್ಮಿ ಯೋಜನೆ' ಆರಂಭಿಸಲಾಗಿದೆ. ಈ ಯೋಜನೆಯಡಿ ಪಾಲಿಕೆಯ 24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರೊಳಗೆ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ 15 ವರ್ಷ ಅವಧಿಯ ಬಾಂಡ್ ನೀಡಲಾಗುವುದು. ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ವಿವಾಹಕ್ಕೆ ನೆರವಾಗುವ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದ್ದು, ಇದಕ್ಕಾಗಿ ಬಜೆಟ್ ನಲ್ಲಿ 60 ಕೋಟಿ ರೂ. ಮೀಸಲಿರಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಯಂ ಉದ್ಯೋಗ ಒದಗಿಸುವ ಸಲುವಾಗಿ 'ಅನ್ನಪೂರ್ಣೇಶ್ವರಿ' ಯೋಜನೆಯಡಿ 'ಸಂಚಾರಿ ಕ್ಯಾಂಟೀನ್' ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ವಾಹನಗಳನ್ನು ಶೇ.50ರ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಇದಕ್ಕಾಗಿ 5 ಕೋಟಿ ರೂ. ಮೀಸಲಿರಿಸಲಾಗಿದೆ.
ವೈದ್ಯಕೀಯ ಪೂರ್ವ ಮಾಹಿತಿಯಿಲ್ಲದೆ ಮಹಿಳೆಯರು ಮಾರಣಾಂತಿಕ ಕ್ಯಾನ್ಸರ್ ಗೆ ಬಲಿಯಾಗುವುದನ್ನು ತಡೆಯಲು, 'ಆರೋಗ್ಯ ಕವಚ' ಯೋಜನೆಯಡಿ ಮಹಿಳೆಯರ ಪ್ರಾಥಮಿಕ ತಪಾಸಣೆಗಾಗಿ ಎರಡು ಸಂಚಾರಿ ಬಸ್‍ಗಳನ್ನು ನಿಯೋಜಿಸಲಾಗುತ್ತಿದೆ. ಇದು ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ನಿಗದಿತ ಪ್ರದೇಶ ಮತ್ತು ಸಮಯದಲ್ಲಿ ಸಂಚಾರಿ ಬಸ್‍ನಲ್ಲಿನ ವೈದ್ಯರ ತಂಡ ಮಹಿಳೆಯರ ಉಚಿತ ಆರೋಗ್ಯ ತಪಾಸಣೆ ನಡೆಸಲಿದೆ.  ಇದಕ್ಕಾಗಿ ಎರಡು ಸುಸಜ್ಜಿತ ಬಸ್‍ಗಳ ಖರೀದಿಗೆ 3 ಕೋಟಿ ರೂ. ಮೀಸಲಿರಿಸಲಾಗಿದೆ.
ಪಾಲಿಕೆಯ ಎಲ್ಲ ವಾರ್ಡ್ ಗಳಲ್ಲಿ ಮಹಿಳೆಯರಿಗಾಗಿಯೇ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿ ವಾರ್ಡ್ ಗೆ 10 ಲಕ್ಷ ರೂ.ಗಳಂತೆ ವಿಶೇಷ ಅನುದಾನ ಘೋಷಿಸಲಾಗಿದೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿಗಳು ಒಳಪಡುವುದಿಲ್ಲ. ಇದಕ್ಕಾಗಿ ಒಟ್ಟು 19.80 ಕೋಟಿ ರೂ. ಮೀಸಲಿರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com