ಬಸ್ ಪ್ರಯಾಣ ದರ ಏರಿಕೆ, 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ: ಸಚಿವ ಡಿ.ಸಿ.ತಮ್ಮಣ್ಣ

ಇಂಧನ ದರ ಹೆಚ್ಚಳ ಮತ್ತು ಇಳಿಕೆಗೆ ಅನುಗುಣವಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮತ್ತು ಇಳಿಕೆ ಮಾಡುವ ಹೊಸ ಪದ್ದತಿಗೆ ರಾಜ್ಯ ಸಾರಿಗೆ ಇಲಾಖೆ...
ಡಿ.ಸಿ.ತಮ್ಮಣ್ಣ
ಡಿ.ಸಿ.ತಮ್ಮಣ್ಣ
Updated on
ಬೆಂಗಳೂರು: ಇಂಧನ ದರ ಹೆಚ್ಚಳ ಮತ್ತು ಇಳಿಕೆಗೆ ಅನುಗುಣವಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮತ್ತು ಇಳಿಕೆ ಮಾಡುವ ಹೊಸ ಪದ್ದತಿಗೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಮೂರು ತಿಂಗಳಿಗೊಮ್ಮೆ ಪ್ರಯಾಣ ದರ ಪರಿಷ್ಕರಣೆ ಮೂಲಕ ಇಲಾಖೆಗೆ ಆಗುವ ನಷ್ಟವನ್ನು ತಗ್ಗಿಸಲು ಹೊಸ ಯೋಜನೆ ನೆರವಾಗಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಶನಿವಾರ ಹೇಳಿದ್ದಾರೆ.
ಇಂದು ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೀಸೆಲ್ ದರ ಹೆಚ್ಚಳವಾದರೂ ಸರ್ಕಾರ ದರ ಪರಿಷ್ಕರಣೆ ಮಾಡಿರಲಿಲ್ಲ. ಇಲಾಖೆಗೆ ನಷ್ಟವಾಗುವುದನ್ನು ತಪ್ಪಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರು ಹೊಸ ವ್ಯೆವಸ್ಥೆ ರೂಪಿಸುವುದಕ್ಕೆ ಒಪ್ಪಿಗೆ ನೀಡಿದರೆ ಮುಂದಿನ ದಿನಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು. 
ಸಾರಿಗೆ ನಿಗಮಗಳಲ್ಲಿ ಭಾರೀ ಅವ್ಯವಹಾರ, ತನಿಖೆಗೆ ಆದೇಶ
ರಾಜ್ಯ ಸಾರಿಗೆ ನಿಗಮದಲ್ಲಿ ಕಂಪ್ಯೂಟರ್ ಮತ್ತು ಸರ್ವರ್ ಖರೀದಿ, ರೆಕ್ಸಿನ್ ಖರೀದಿ, ಬಸ್ ಗಳ ಬಾಡಿ ಬಿಲ್ಡಿಂಗ್ ಹಾಗೂ ಬಿಡಿ ಭಾಗ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ನೂರಾರು ಕೋಟಿ ನಷ್ಟ ಉಂಟಾಗಿದೆ. ಆರೋಪ ಹಿನ್ನಲೆಯಲ್ಲಿ ವಿವಿಧ ನಿಗಮಗಳ ಒಟ್ಟು 26 ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಕಳೆದ 5 ವರ್ಷಗಳಲ್ಲಿ ನಿರಂತರ ಅಕ್ರಮ ಅವ್ಯವಹಾರಗಳಿಂದ ಬಿಎಂಟಿಸಿಗೆ 250 ಕೋಟಿ ರೂ. ನಷ್ಟವಾಗಿದೆ. 2017-18ರಲ್ಲಿ 112 ಕೋಟಿ ರೂ ವೆಚ್ಚದಲ್ಲಿ ಬಾಡಿ ಬಿಲ್ಡಿಂಗ್ ಮಾಡಲಾಗಿದ್ದು, ಎಲ್ಲಾ ಪ್ರಕರಣಗಳಲ್ಲೂ ಅವ್ಯವಹಾರ ಕಂಡು ಬಂದಿರುವ ಹಿನ್ನೆಲೆಯಲ್ಲಿ 5 ವರ್ಷಗಳಲ್ಲಿ ನಡೆದ ಎಲ್ಲಾ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ ಎಂದರು.
ಬಸ್ ಸೀಟುಗಳ ಹಾಗೂ ಅವುಗಳಿಗೆ ಹೊದಿಸುವ ಕವರ್ ಗಳು, ರೆಕ್ಸಿನ್ ಖರೀದಿಯಲ್ಲಿ ಭಾರೀ ಅಕ್ರಮ ಪತ್ತೆಯಾಗಿದೆ. ಕಳಪೆ ಗುಣಮಟ್ಟದ ರೆಕ್ಸಿನ್ ಖರೀದಿ ಮಾಡಲಾಗಿದ್ದು, ಖರೀದಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ನಾಲ್ವರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ. ಅಂತೆಯೇ ಕಂಪ್ಯೂಟರ್ ಹಾಗೂ ಸರ್ವರ್ ಖರೀದಿಯಲ್ಲೂ ಅಕ್ರಮ ಕಂಡು ಬಂದಿದ್ದು, ವಿಚಕ್ಷಣಾ ದಳ ತನಿಖೆಯಲ್ಲಿ ಹಗರಣ ಬಯಲಾಗಿದೆ.
17 ಕೋಟಿ ರೂ ವೆಚ್ಚದಲ್ಲಿ ಕಂಪ್ಯೂಟರ್ ಹಾಗೂ ಸರ್ವರ್ ಖರೀದಿಸಿ ಅಕ್ರಮ ಎಸಗಲಾಗಿರುವ 7 ಜನ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದರು. 
ಈಶಾನ್ಯ ಸಾರಿಗೆ ಇಲಾಖೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ನಕಲು ಸಹಿ ಮಾಡಿ 141 ಜನ ವರ್ಗಾವಣೆ ಮಾಡಿ ಅಕ್ರಮ ಎಸಗಲಾಗಿದೆ. ಈ ಸಂಬಂಧ 15 ಜನ ಅಧಿಕಾರಿಗಳು, ಕಚೇರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ನೂತನ ಬಸ್ ಗಳ ಬಾಡಿ ಬಿಲ್ಡಿಂಗ್ ಹಾಗೂ ರಿಪೇರಿ ಸೇರಿದಂತೆ ಬಿಡಿಭಾಗಗಳ ಖರೀದಿಯಲ್ಲೂ ಭಾರೀ ಅಕ್ರಮ ನಡೆಸಿರುವ ಮಾಹಿತಿ ಇದೆ. 2017-18ರ ವರ್ಷದಲ್ಲಿ 112 ಕೋಟಿ ರೂ. ಗಳ ವೆಚ್ಚದಲ್ಲಿ ಬಾಡಿ ಬಿಲ್ಡಿಂಗ್ ಮಾಡಲಾಗಿದೆ. ಹೀಗಾಗಿ ಕಳೆದ 5 ವರ್ಷಗಳಲ್ಲಿ ನಡೆದ ಎಲ್ಲಾ ಖರೀದಿ, ವಾಹನ ಚೌಕಟ್ಟು ನಿರ್ಮಾಣ ಸೇರಿದಂತೆ, ಬಿಡಿಬಾಗಗಳ ಪೂರೈಕೆ ಇಂಡೆಂಟ್, ಬಿಡಿಭಾಗಗಳ ಪೂರೈಕೆದಾರರು, ಕಂಪನಿಯ ಮೂಲ ದರ, ಮಾರಾಟ ದರ ಸಮಗ್ರ ಮಾಹಿತಿ ನೀಡಲು ಇಲಾಖೆಗೆ ಆದೇಶಿಸಲಾಗಿದೆ ಎಂದರು.
ನಿರಂತರ ನಷ್ಟದಲ್ಲಿರುವ ಈಶಾನ್ಯ, ವಾಯುವ್ಯ ಸಾರಿಗೆ ಸೇರಿದಂತೆ ನಾಲ್ಕು ನಿಗಮಗಳಲ್ಲೂ ನಷ್ಟ ಸಂಭವಿಸಿದೆ. ನಷ್ಟಕ್ಕೆ ಕಾರಣಗಳು, ಅಕ್ರಮಗಳ ಹಿನ್ನಲೆ ಬಗ್ಗೆ ಎಲ್ಲಾ ನಿಗಮಗಳಿಂದ ವರದಿ ಕೇಳಿದ್ದೇನೆ. ಬಿಎಂಟಿಸಿಯಲ್ಲಿ ವರ್ಷಕ್ಕೆ 250 ಕೋಟಿ ರೂ. ನಷ್ಟವಾಗಿದೆ ಇದಕ್ಕೆ ಅಕ್ರಮಗಳೇ ಕಾರಣ ಎಂಬ ಮಾಹಿತಿ ಇದೆ ಎಂದರು.
ದಿನನಿತ್ಯದ ವಿಭಾಗವಾರು ಉತ್ತಮ ಆದಾಯವಿದೆ. ಹೀಗಾಗಿ ನಿಗಮ ನಷ್ಟದಲ್ಲಿ ಇರಲು ಸಾಧ್ಯವೇ ಇಲ್ಲ. ತಮಗೆ ಮೂರು ವರ್ಷ ಅವಕಾಶ ನೀಡಲಿ ಎಲ್ಲಾ ನಿಗಮಗಳನ್ನು ಲಾಭದಾಯಕವಾಗಿ ನಡೆಯುವಂತೆ ಮಾಡುತ್ತೇನೆಂದು ಸಚಿವ ತಮ್ಮಣ್ಣ ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ  ಸ್ಲೀಪರ್ ಕೋಚ್, ಮಲ್ಟಿ ಆಕ್ಸೆಲ್, ಲಕ್ಸೂರಿ ಬಸ್ ಸೇರಿದಂತೆ  ಒಟ್ಟು 3 ಸಾವಿರ ಬಸ್ ಖರೀದಿಸಲು ತೀರ್ಮಾನಿಸಲಾಗಿದೆ. 7 ಲಕ್ಷ ಕಿ.ಮಿ. ಓಡಿದ ಬಸ್ ಗಳನ್ನು ಮರು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಪ್ರತಿ ವಾಹನಕ್ಕೆ 5-6 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಮರು ನಿರ್ಮಿಸಿದ ಬಸ್ ಗಳನ್ನು ಸುಮಾರು 15 ಲಕ್ಷ ಕಿ.ಮಿ ವರೆಗೆ ಓಡಿಸಬಹುದು. ಅವುಗಳನ್ನು ಗುಜರಿಗೆ ಹಾಕುವುದಿಲ್ಲ ಎಂದು ಅವರು ಹೇಳಿದರರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com