ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕೊಠಡಿಯ ಟೇಬಲ್, ಕುರ್ಚಿ, ಕಾರ್ಪೆಟ್ ಖರೀದಿಗೆ 20 ಲಕ್ಷ ರೂ!

ರಾಜ್ಯವನ್ನಾಳುವ ಮಂತ್ರಿಗಳು ಕುಳಿತುಕೊಳ್ಳುವ ಪೀಠೋಪಕರಣಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ....
ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್
ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್

ಬೆಂಗಳೂರು: ಬಡ ನಾಗರಿಕರು ಒಂದೊತ್ತಿನ ಊಟಕ್ಕೆ ಪರಿತಪಿಸುವ ಪರಿಸ್ಥಿತಿ ನಡುವೆ ರಾಜ್ಯವನ್ನಾಳುವ ಮಂತ್ರಿಗಳು ಕುಳಿತುಕೊಳ್ಳುವ ಪೀಠೋಪಕರಣಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂಬ ಅಂಶ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಗಳು ಕುಳಿತುಕೊಳ್ಳುವ ಕುರ್ಚಿ, ನೆಲಕ್ಕೆ ಹಾಸುವ ಕಾರ್ಪೆಟ್ ಮತ್ತು ಟೇಬಲ್ ಗೆ ಸುಮಾರು 20 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.

ಡಾ ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಒಂದು ತಿಂಗಳು ಕಳೆದ ನಂತರ ವಿಧಾನ ಸೌಧದಲ್ಲಿರುವ ಅವರ ಕೊಠಡಿಯ ನವೀಕರಣಕ್ಕೆ 70 ಲಕ್ಷ ರೂಪಾಯಿ ಅನುಮೋದನೆ ಮಾಡಲಾಗಿತ್ತು. ನವೀಕರಣ ಕೆಲಸದ ಸರ್ಕಾರಿ ಆದೇಶ ಕೊಠಡಿ ಸಂಖ್ಯೆ 327 ಮತ್ತು 328ಕ್ಕೆ ಜೂನ್ 26ರಂದು ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿತ್ತು ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆ 1999ರ ಪಾರದರ್ಶಕತೆ ಕಾಯ್ದೆಯ ಸೆಕ್ಷನ್ 4ಜಿಯಡಿ ವಿನಾಯಿತಿ ಕೂಡ ನೀಡಲಾಗಿತ್ತು.

ಆದರೆ ಲೋಕೋಪಯೋಗಿ ಇಲಾಖೆಯ ಮೂಲಗಳು ಹೇಳುವ ಪ್ರಕಾರ ಯಾವುದೇ ನವೀಕರಣ ಕಾರ್ಯ ಪರಮೇಶ್ವರ್ ಅವರ ಕೊಠಡಿಯಲ್ಲಿ ನಡೆದಿಲ್ಲ ಕೇವಲ ಒಳಾಂಗಣ ಕೆಲಸ ಮಾಡಲಾಗಿದೆಯಷ್ಟೆ. ಸಣ್ಣಪುಟ್ಟ ಕೆಲಸಗಳಾದ ಟೇಬಲ್, ಕುರ್ಚಿ ಮತ್ತು ಕಾರ್ಪೆಟ್ ಖರೀದಿಗೆ 20 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ, ಇನ್ನುಳಿದ ನವೀಕರಣ ಕಾರ್ಯ ಕೈಗೊಳ್ಳಬೇಕಿದೆ ಎನ್ನುತ್ತಾರೆ.

ಹಂಪಿ ಉತ್ಸವದಂತಹ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿಗಳು ನೀಡುವ ನಿಧಿಯಲ್ಲಿ ಕಡಿತ ಮಾಡಲು ನೋಡುತ್ತಿರುವಾಗ ಉಪ ಮುಖ್ಯಮಂತ್ರಿಗಳು ಕುಳಿತುಕೊಳ್ಳುವ ಕೊಠಡಿಯ ನವೀಕರಣಕ್ಕೆ ಲಕ್ಷಗಟ್ಟಲೆ ಹಣ ವ್ಯಯಿಸುತ್ತಿರುವುದು ಹಲವರ ಹುಬ್ಬೇರಿಸಿದೆ.

ಆರ್ ಟಿಐ ಕಾರ್ಯಕರ್ತ ಮರಿಲಿಂಗೇ ಗೌಡ ಮಾಲಿ ಪಾಟೀಲ್ ಈ ಬಗ್ಗೆ ಪ್ರಶ್ನಿಸುತ್ತಾರೆ. ಕೆಟಿಟಿಪಿ ಕಾಯ್ದೆಯಿಂದ ವಿನಾಯ್ತಿ ಪಡೆಯುವ ಅಗತ್ಯವೇನಿದೆ, ಸಾರ್ವಜನಿಕ ಹಣ ಬಳಸಿ ಕೊಠಡಿಯನ್ನು ನವೀಕರಣ ಮಾಡುವ ಅವಶ್ಯಕತೆಯಿದೆಯೇ, ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎನ್ನುತ್ತಾರೆ.

ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com