ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ: ಪ್ರಧಾನಿ ಮೋದಿಯವರಿಗೆ ಖುದ್ದು ಭೇಟಿ ಮನವಿ ಸಲ್ಲಿಸುತ್ತೇನೆ- ಸಿಎಂ ಕುಮಾರಸ್ವಾಮಿ

ನಡೆದಾಡುವ ದೇವರು, ಕಾಯಕ ಯೋಗಿ, ತ್ರಿವಿಧ ದಾಸೋಹಿ ಶತಾಯುಷಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ...
ಸಿದ್ದಗಂಗಾ ಶ್ರೀಗಳು
ಸಿದ್ದಗಂಗಾ ಶ್ರೀಗಳು

ಬೆಂಗಳೂರು: ನಡೆದಾಡುವ ದೇವರು, ಕಾಯಕ ಯೋಗಿ, ತ್ರಿವಿಧ ದಾಸೋಹಿ ಶತಾಯುಷಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಅನಾರೋಗ್ಯಕ್ಕೀಡಾಗಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಕಾಣಲು ಬರುತ್ತಿರುವ ಗಣ್ಯರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ಮಧ್ಯೆ ಶ್ರೀಗಳಿಗೆ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಬೇಕೆಂದು ರಾಜಕೀಯ ಮುಖಂಡರಾದಿಯಾಗಿ ಸಾರ್ವಜನಿಕರೆಲ್ಲರೂ ಒಕ್ಕೊರಲಿನಿಂದ ಕೇಳುತ್ತಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ 2006ರಲ್ಲಿ ನಾನು ಮುಖ್ಯಮಂತ್ರಿಯಾದಾಗಲೂ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಅಂದಿನ ರಾಷ್ಟ್ರಪತಿ ಡಾ ಅಬ್ದುಲ್ ಕಲಾಂರವರನ್ನು ಒತ್ತಾಯಿಸಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಈ ಸಂಬಂಧ ಅಗತ್ಯಬಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಯವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಕೋಟ್ಯತರ ಜನರ ಬಯಕೆ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸಬೇಕೆಂಬುದು. ಈ ನಿಟ್ಟಿನಲ್ಲಿ ಸಾಧ್ಯವಾದ ಪ್ರಯತ್ನ ನಡೆದಿದೆ. ಅದು ಶೀಘ್ರವೇ ಈಡೇರುತ್ತದೆ ಎಂದು ಆಶಿಸುತ್ತೇನೆ ಎಂದು ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶ್ರೀಗಳು ಭೂಮಿ ಮೇಲಿರುವ ದೇವರು. ಅವರಿಗೆ ಭಾರತ ರತ್ನ ಅರ್ಪಣೆ ಮಾಡುವ ವಿಚಾರದಲ್ಲಿ ಎರಡು ಪ್ರಶ್ನೆಯೇ ಇಲ್ಲ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆನ್ನೋದೇ ನನ್ನ ಒತ್ತಾಯ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ.ರೇವಣ್ಣ ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ಹೇಳಿದ್ದಾರೆ.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಅಭಿಯಾನವೇ ಆರಂಭವಾಗಿದೆ. ಅವರು ಗುಣಮುಖರಾಗಿ ಮೊದಲಿನಂತೆ ನಡೆದಾಡುವಂತಾಗಲಿ ಎಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಭಕ್ತರು ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನು, ಶ್ರೀಗಳ ದರ್ಶನ ಪಡೆಯಲು ದೇಶದ ಮೂಲೆ ಮೂಲೆಯಿಂದ ಗಣ್ಯರು ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಠಕ್ಕೆ ಹತ್ತಿರದ ಪ್ರದೇಶಗಳಲ್ಲಿ 14 ಹೆಲಿಪ್ಯಾಡ್​ಗಳನ್ನು ನಿರ್ಮಾಣ ಮಾಡಲಾಗಿದೆ. ತುಮಕೂರು ಜಿಲ್ಲಾ ಪೊಲೀಸರು ತುಮಕೂರು ನಗರದ ವಿವಿ ಕ್ಯಾಂಪಸ್​ನಲ್ಲಿ 4, ಮಹಾತ್ಮ ಗಾಂಧಿ ಸ್ಟೇಡಿಯಮ್​ನಲ್ಲಿ 1, ಎಸ್​ಐಟಿ ಕಾಲೇಜಿನಲ್ಲಿ 2, ಹಿರೇಹಳ್ಳಿ ಹಾಗೂ ಪಂಡಿತಹಳ್ಳಿ ಬಳಿ 7 ಹೆಲಿಪ್ಯಾಡ್​ಗಳನ್ನು ನಿರ್ಮಿಸಿದ್ದಾರೆ.

ಮಠದ ಸುತ್ತಮುತ್ತ ಹಾಗೂ ತುಮಕೂರಿನ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.  ಕೇಂದ್ರ ವಲಯ ಐಜಿಪಿ ದಯಾನಂದ ಅವರು ತುಮಕೂರಿನಲ್ಲೇ ವಾಸ್ತವ್ಯ ಹೂಡಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಇಂದು ಸಿಎಂ ಕೂಡ ಮಠಕ್ಕೆ ಬರುವ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಯಾವುದೇ ಸಮಸ್ಯೆಯಾಗದಂತೆ ಖುದ್ಧು ಐಜಿಪಿಯಿಂದಲೇ ಭದ್ರತೆ ಉಸ್ತುವಾರಿ ಪರಿಶೀಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com